

ಸಿರಗುಪ್ಪ: ಗುಳೆ ತಡೆಯಲು ಸರ್ಕಾರ ನರೇಗಾ ಯೋಜನೆ ಜಾರಿಗೆ ತಂದಿದ್ದು, ಗ್ರಾಮದ ಕೂಲಿ ಕಾರ್ಮಿಕರು ಮತ್ತು ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿದರು.
ತಾಲೂಕಿನ ಉಪ್ಪಾರಹೊಸಳ್ಳಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರಗತಿಪರ ರೈತ ಎಸ್.ಶರಣಬಸವ ಜಮೀನಿನಲ್ಲಿ ಕೃಷಿ ಇಲಾಖೆ ಕೈಗೊಂಡಿರುವ ಕೃಷಿ ಹೊಂಡ ನಿರ್ಮಾಣ ಕಾಮಗಾರಿ ಶುಕ್ರವಾರ ಪರಿಶೀಲಿಸಿ ಮಾತನಾಡಿದರು. ರೈತರು ಮಳೆ ನೀರು ಸಂಗ್ರಹಕ್ಕೆ ಜಮೀನುಗಳಲ್ಲಿ ಹೊಂಡ ನಿರ್ಮಿಸಿಕೊಳ್ಳಬೇಕು. ಇದರಿಂದ ವರ್ಷಪೂರ್ತಿ ಮಿತ ನೀರಾವರಿ ಬೆಳೆಗಳನ್ನು ಬೆಳೆಯಲು ಅನುಕೂಲವಾಗುತ್ತದೆ. ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು, ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡುವ ದೃಷ್ಟಿಯಿಂದ ಕೃಷಿ ಇಲಾಖೆ ಮೂಲಕ ಸಣ್ಣ ರೈತರ ಜಮೀನುಗಳಲ್ಲಿ ಕೃಷಿ ಹೊಂಡ, ಕ್ಷೇತ್ರ ಬದುಗಳ ನಿರ್ಮಾಣ ಸೇರಿ ವಿವಿಧ ಕಾಮಗಾರಿ ಆರಂಭಿಸಲಾಗಿದೆ. ಜಾಬ್‌ಕಾರ್ಡ್ ಹೊಂದಿದವರಿಗೆ ಉದ್ಯೋಗ ನೀಡಲಾಗುತ್ತಿದೆ. ಕೆಲಸ ಮುಗಿದ ಮೂರು ದಿನದೊಳಗೆ ಕೂಲಿಯನ್ನು ಅವರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಜೀರ್ ಅಹ್ಮದ್ ಮಾತನಾಡಿದರು. ಕರೂರು ಹೋಬಳಿಯ ಕೃಷಿ ಅಧಿಕಾರಿಗಳಾದ ಪಲ್ಲವಿ, ಪರಮೇಶ್ವರ ರೆಡ್ಡಿ, ಪ್ರಗತಿಪರ ರೈತ ಎಸ್.ಶರಣಬಸವ, ಮುಖಂಡ ಎಂ.ಎಸ್.ಸಿದ್ದಪ್ಪ ಇತರರಿದ್ದರು.