

ಶ್ರೀರಂಗಪಟ್ಟಣ: ಲಾಕ್‌ಡೌನ್ ಹಿನ್ನೆಲೆಯಲ್ಲಿ 2 ತಿಂಗಳಿಂದ ತಾಲೂಕಿನಲ್ಲಿ ಸಿಲುಕಿದ್ದ ಬಿಹಾರ ಹಾಗೂ ಉತ್ತರ ಪ್ರದೇಶದ ಮೂಲದ 75 ವಲಸೆ ಕಾರ್ಮಿಕರನ್ನು ಭಾನುವಾರ ಬೆಳಗ್ಗೆ ತಾಲೂಕು ಆಡಳಿತ ಅವರ ಸ್ವ-ಗ್ರಾಮಕ್ಕೆ ಕಳುಹಿಸಿಕೊಟ್ಟಿತು.
ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಿಹಾರ ಹಾಗೂ ಉತ್ತರ ಪ್ರದೇಶದ ವಲಸೆ ಕಾರ್ಮಿಕರನ್ನು 25 ಜನರಂತೆ 3 ಬಸ್‌ಗಳಲ್ಲಿ ತಹಸೀಲ್ದಾರ್ ಎಂ.ವಿ.ರೂಪಾ ನೇತೃತ್ವದ ಅಧಿಕಾರಿಗಳು ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳ ತಂಡ ದಾಖಲೆಗಳನ್ನು ಪರಿಶೀಲಿಸಿ ಕಳುಹಿಸಲಾಯಿತು.
ತಹಸೀಲ್ದಾರ್ ಎಂ.ವಿ.ರೂಪಾ ಮಾತನಾಡಿ, 75 ವಲಸೆ ಕಾರ್ಮಿಕರು 2 ತಿಂಗಳುಗಳಿಂದ ತಮ್ಮ ಗ್ರಾಮಗಳಿಗೆ ತೆರಳಲು ಸಾಧ್ಯವಾಗದೆ ಇಲ್ಲಿಯೇ ಸಿಲುಕಿಕೊಂಡಿದ್ದರು. ಇವರೆಲ್ಲರೂ ಕಟ್ಟಡ, ಕಾರ್ಖಾನೆ ಹಾಗೂ ಹೋಂ ಗಾರ್ಡ್ ನೌಕರರಾಗಿದ್ದು, ಅವರ ಬೇಡಿಕೆ ಮೇರೆಗೆ ಜಿಲ್ಲಾಡಳಿತದ ನಿರ್ದೇಶನದಂತೆ ವೈದ್ಯಕೀಯ ತಪಾಸಣೆ ನಡೆಸಿ ಶ್ರೀರಂಗಪಟ್ಟಣದಿಂದ ಹಾಸನದ ವರೆಗೆ ರಾಜ್ಯ ಸಾರಿಗೆ ಸಂಸ್ಥೆ ಬಸ್ ಮೂಲಕ ಬಿಡಲಾಗುತ್ತಿದ್ದು, ಹಾಸನದಿಂದ ರೈಲು ಮೂಲಕ ಅವರವರ ರಾಜ್ಯದ ಸ್ವ-ಗ್ರಾಮಗಳಿಗೆ ಕಳುಹಿಸುತ್ತಿರುವುದಾಗಿ ತಿಳಿಸಿದರು.