ತುಮಕೂರು ಜಿಲ್ಲೆಯಿಂದ ತವರಿನತ್ತ ಹೊರಟ ವಲಸೆ ಕಾರ್ಮಿಕರು

DSC_8704
Published on

ತುಮಕೂರು: ಜಿಲ್ಲೆಯ ವಿವಿಧ ಭಾಗದಲ್ಲಿ ನೆಲೆನಿಂತಿದ್ದ ರಾಜ್ಯದ ವಿವಿಧ ಜಿಲ್ಲೆಗಳ 765 ವಲಸೆ ಕಾರ್ಮಿಕರನ್ನು ಸ್ವಗ್ರಾಮಗಳಿಗೆ ಕಳುಹಿಸುವ ಕಾರ್ಯಾಚರಣೆ ಮಂಗಳವಾರ ಆರಂಭವಾಯಿತು.

ಕೆಎಸ್‌ಆರ್‌ಟಿಸಿ ವತಿಯಿಂದ ದೈಹಿಕ ಅಂತರ ಕಾಪಾಡಿಕೊಂಡು ಪರಸ್ಥಳಗಳಿಗೆ ವಲಸೆ ಕಾರ್ಮಿಕರನ್ನು ಕಳುಹಿಸಿಕೊಡಲಾಯಿತು. ಒಟ್ಟು 24 ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು.ಮುದ್ದೇಬಿಹಾಳ್, ರಾಯಚೂರು, ಶಿವಮೊಗ್ಗ, ಹಾವೇರಿ, ಕಲಬುರಗಿ, ಬಾಗಲಕೋಟೆ, ಹುಬ್ಬಳ್ಳಿ, ಬೆಂಗಳೂರು, ಯಾದಗಿರಿ, ರಾಯಚೂರು-ಬಳ್ಳಾರಿ, ಹಾಸನ-ಶಿವಮೊಗ್ಗ, ಯಾದಗಿರಿ-ಕಲಬುರಗಿ ಜಿಲ್ಲೆಗಳಿಗೆ ಒಟ್ಟು 13 ಬಸ್‌ಗಳಲ್ಲಿ 438 ಕಾರ್ಮಿಕರು ತುಮಕೂರು ನಗರದಿಂದ ಪಯಣ ಬೆಳೆಸಿದರು.

ಮಂಗಳವಾರ ಬೆಳಗ್ಗೆ ನಗರದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಸಂಸದ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್ ಬಸ್‌ಗಳಿಗೆ ಹಸಿರು ನಿಶಾನೆ ತೋರಿದರು. 20ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರು ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿದರು. ಆರ್.ರಾಜೇಂದ್ರ ಅಭಿಮಾನಿ ಬಳಗದ ವತಿಯಿಂದ ಬಸ್‌ನಲ್ಲಿ ತೆರಳುತ್ತಿದ್ದವರಿಗೆ ಊಪಹಾರ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಬಸ್‌ಗಳನ್ನು ಸ್ಯಾನಿಟೈಸರ್‌ಗಳಿಂದ ಸ್ವಚ್ಛಗೊಳಿಸಲಾಗಿತ್ತು, ಒಬ್ಬರು ಚಾಲಕರಿಗೆ ಮಾತ್ರ ಬಸ್‌ನಲ್ಲಿ ಅವಕಾಶ ನೀಡಲಾಗಿತ್ತು, ಚಾಲಕರ ಬಳಿ ಪ್ರಯಾಣಿಕರು ತೆರಳದಂತೆ ಪಟ್ಟಿ ಕಟ್ಟಲಾಗಿತ್ತು. ಮೂರು ಸೀಟಿನ ಸಾಮರ್ಥ್ಯದ ಸೀಟಿನಲ್ಲಿ ಇಬ್ಬರು ಹಾಗೂ ಎರಡು ಸೀಟಿನ ಸಾಮರ್ಥ್ಯದ ಸೀಟಿನಲ್ಲಿ ಒಬ್ಬರಿಗೆ ಅವಕಾಶನೀಡಲಾಗಿತ್ತು. ಎಲ್ಲ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿದ್ದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ವಲಸೆ ಕಾರ್ಮಿಕರಿಗೆ ತೊಂದರೆಯಾಗದ ರೀತಿಯಲ್ಲಿ ಸರ್ಕಾರ, ಕೆಎಸ್‌ಆರ್‌ಟಿಸಿ ಮತ್ತು ಜಿಲ್ಲಾಡಳಿತ ವತಿಯಿಂದ ಮಂಗಳವಾರ ಹಾಗೂ ಬುಧವಾರ ತಮ್ಮ ತಮ್ಮ ಊರುಗಳಿಗೆ ಹೋಗಲು ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಎಲ್ಲರ ಆರೋಗ್ಯ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ, ಎಷ್ಟು ಜನ ಬಂದರೂ ಕರೆದುಕೊಂಡು ಹೋಗುವ ವವ್ಯಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ ಎಂದರು. ವಿಭಾಗ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ್ ಮಾತನಾಡಿ, ಜಿಲ್ಲಾಡಳಿತದಿಂದ ತುಮಕೂರು ನಗರದಲ್ಲಿ ಉಳಿದು ಕೊಂಡಿರುವ ಮುದ್ದೆಬಿಹಾಳ, ಗುಲ್ಬರ್ಗ, ರಾಯಚೂರು, ಶಿವಮೊಗ್ಗ, ಹಾವೇರಿ, ಹುಬ್ಬಳ್ಳಿ ಹೀಗೆ ನಾನಾ ಕಡೆಯ ವಲಸೆ ಕಾರ್ಮಿಕರನ್ನು ತಮ್ಮತಮ್ಮ ಊರುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಒಂದು ಬಸ್‌ನಲ್ಲಿ 30 ಜನರು ಮಾತ್ರ ಹೋಗುವ ಅವಕಾಶ ಕಲ್ಪಿಸಲಾಗಿದೆ ಎಂದರು.ಉಪವಿಭಾಗಾಧಿಕಾರಿ ಅಜಯ್ ಮಾತಾನಾಡಿ, ಅಂತರ್ ಜಿಲ್ಲೆಗೆ ಹೋಗುವವರಿಗೆ ಜಿಲ್ಲಾಡಳಿತದಿಂದ ಪ್ರತೀ ಒಬ್ಬ ವ್ಯಕ್ತಿಗೂ ಆರೋಗ್ಯ ತಪಾಸಣೆಯನ್ನು ಸಹ ಮಾಡಿ ಕಳುಹಿಸಲಾಗುತ್ತಿದೆ ಮತ್ತು ಅವರಿಗೆ ಊಟದ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದರು. ಸಂಸದ ಜಿ.ಎಸ್. ಬಸವರಾಜು, ತಹಶೀಲ್ದಾರ್ ಮೋಹನ್ ಕುಮಾರ್ ಇದ್ದರು.

ಗುಬ್ಬಿ ಬಸ್ ನಿಲ್ದಾಣದಿಂದ ಕಲಬುರಗಿ ಜಿಲ್ಲೆಗೆ 30, ಕುಣಿಗಲ್‌ನಿಂದ ಕರಟಗಿ ಹಾಗೂ ಬಾಗಲಕೋಟೆ-ವಿಜಾಪುರ ಜಿಲ್ಲೆಗಳಿಗೆ ಒಟ್ಟು 73, ಮಧುಗಿರಿಯಿಂದ ತುಮಕೂರಿಗೆ 22, ಚಿಕ್ಕನಾಯಕನಹಳ್ಳಿಯಿಂದ ಬೆಂಗಳೂರು ಹಾಗೂ ವಿಜಾಪುರಕ್ಕೆ 91, ತುರುವೇಕೆರೆ ಬಸ್‌ನಿಲ್ದಾಣದಿಂದ ಬೆಂಗಳೂರು, ರಾಯಚೂರು ಹಾಗೂ ವಿಜಾಪುರಕ್ಕೆ 111 ಪ್ರಯಾಣಿಕರು ತಮ್ಮ ಊರಿಗೆ ಸೇರಲು ಒಟ್ಟು 11 ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಬಸ್‌ನಲ್ಲಿ ದೈಹಿಕ ಅಂತರ ಕಾಪಾಡಲು 30 ಜನರ ಪ್ರಯಾಣಕ್ಕೆ ಅವಕಾಶ ಮಾಡಲಾಗಿತ್ತು. ಗಜೇಂದ್ರಕುಮಾರ್ ವಿಭಾಗೀಯ ನಿಯಂತ್ರಣಾಧಿಕಾರಿ, ತುಮಕೂರು 40 ದಿನದಿಂದ ಇಲ್ಲೆಯೇ ಇದ್ದು ಮನಸ್ಸಿಗೆ ತೀವ್ರ ಹಿಂಸೆಯಾಗಿತ್ತು. ಈಗ ನಮ್ಮೂರಿಗೆ ಹೋಗಲು ಅವಕಾಶ ನೀಡಿರುವ ಸರ್ಕಾರಕ್ಕೆ ಧನ್ಯವಾದಗಳು. ಎಲ್ಲವೂ ಸರಿಯಾದರೆ ಮತ್ತೆ ಕೂಲಿಗೆ ಇಲ್ಲಿಗೆ ಬರುತ್ತೇವೆ, ದ್ಯಾವಯ್ಯ ವಲಸೆ ಕಾರ್ಮಿಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net