ಊರಿಗೆ ಕಳುಹಿಸಲು ಕಾರ್ಮಿಕರ ಪಟ್ಟು

workers new
Published on

ಮಂಗಳೂರು: ಕಾರ್ಮಿಕರಿಗೆ ರೈಲು ವ್ಯವಸ್ಥೆ ಕಲ್ಪಿಸಲಾಗಿದೆ ಎನ್ನುವ ತಪ್ಪು ಮಾಹಿತಿಯಿಂದ ಹೊರ ರಾಜ್ಯದ 500ಕ್ಕೂ ಅಧಿಕ ವಲಸೆ ಕಾರ್ಮಿಕರು ಶುಕ್ರವಾರ ಕಾಲ್ನಡಿಗೆಯಲ್ಲೇ ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ, ಊರಿಗೆ ಕಳುಹಿಸುವಂತೆ ನಿಲ್ದಾಣದ ಹೊರ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಲಾಕ್‌ಡೌನ್‌ನಿಂದ ಊರಿಗೆ ಹೋಗಲಾಗದೆ ದೇರಬೈಲ್, ಸುರತ್ಕಲ್, ಕೆಪಿಟಿ, ನಂತೂರು, ಕೂಳೂರು ಮತ್ತಿತರೆಡೆ ವಾಸವಿದ್ದ ಉತ್ತರ ಪ್ರದೇಶ, ಜಾರ್ಖಂಡ್, ಮಧ್ಯಪ್ರದೇಶ, ರಾಜಸ್ಥಾನ, ಅಸ್ಸೋಂ ಮತ್ತಿತರ ರಾಜ್ಯದ ವಲಸೆ ಕಾರ್ಮಿಕರು ಶುಕ್ರವಾರ ಬೆಳಗ್ಗೆಯೇ ರೈಲು ನಿಲ್ದಾಣದಲ್ಲಿ ಜಮಾಯಿಸಿದ್ದರು.

ದೈಹಿಕ ಅಂತರ ಕಾಪಾಡದೆ ನಿಂತಿದ್ದವರನ್ನು ರೈಲ್ವೆ ಮತ್ತು ಪಾಂಡೇಶ್ವರ ಠಾಣೆ ಪೊಲೀಸರು ವಾಪಸ್ ಹೋಗುವಂತೆ ಹೇಳಿದಾಗ ಕಾರ್ಮಿಕರು ಮಾತಿನ ಚಕಮಕಿ ನಡೆಸಿದರು. ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಆರೋಪಿಸಿ ವಿಡಿಯೋ ಮಾಡುತ್ತಿದ್ದ ಓರ್ವನನ್ನು ಪೊಲೀಸರು ವಶಕ್ಕೆ ಪಡೆಯಲು ಮುಂದಾದಾಗ ಕಾರ್ಮಿಕರೆಲ್ಲ ವಾಗ್ವಾದಕ್ಕಿಳಿದರು. ಗೊಂದಲ ನಿರ್ಮಾಣವಾಗಿದ್ದರಿಂದ ವಶಕ್ಕೆ ಪಡೆಯುವ ಯತ್ನವನ್ನು ಪೊಲೀಸರು ಕೈಬಿಟ್ಟರು.

ಸ್ಥಳಕ್ಕೆ ಆಗಮಿಸಿದ ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ಮದನ್ ಮೋಹನ್ ಹಾಗೂ ರೈಲ್ವೆ ಅಧಿಕಾರಿಗಳು, ನಿಮಗೆ ಮನೆ ಬಾಡಿಗೆ ವಿಚಾರವಾಗಿ ಸಮಸ್ಯೆ ಆಗಿದ್ದರೆ ಠಾಣೆಗಳ ಮೂಲಕ ಕ್ರಮ ಕೈಗೊಳ್ಳಲಾಗುವುದು. ಆಹಾರ ಸಾಮಗ್ರಿಗೂ ವ್ಯವಸ್ಥೆ ಮಾಡಲಾಗುವುದು. ಇನ್ನೂ ಕೆಲ ದಿನ ತಾಳ್ಮೆಯಿಂದಿರಿ. ಇತರ ರಾಜ್ಯಗಳೊಂದಿಗೆ ರಾಜ್ಯ ಸರ್ಕಾರ ಮಾತುಕತೆ ನಡೆಸಿ ಊರಿಗೆ ತೆರಳಲು ವ್ಯವಸ್ಥೆ ಮಾಡಲಿದೆ ಎಂದು ಕಾರ್ಮಿಕರ ಮನವೊಲಿಸಿದರು. ಪಟ್ಟು ಬಿಡದ ಕಾರ್ಮಿಕರು ನ್ಯಾಯ ಒದಗಿಸಿ ಎಂದು ಪೋಸ್ಟರ್ ಪ್ರದರ್ಶಿಸಿ ಧರಣಿ ಮುಂದುವರಿಸಿದರು.

ಎರಡು ದಿನಗಳಲ್ಲಿ ವ್ಯವಸ್ಥೆ: ಮೂರು ದಿನಗಳೊಳಗೆ ಊರಿಗೆ ತೆರಳಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸ್ಥಳಕ್ಕೆ ಭೇಟಿ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಭರವಸೆ ನೀಡಿ, ವಾಸ್ತವ್ಯ ಇರುವಲ್ಲಿಗೆ ವಾಪಸ್ ತೆರಳುವಂತೆ ಮನವಿ ಮಾಡಿದರು. ಎರಡು ದಿನಗಳೊಳಗೆ ವ್ಯವಸ್ಥೆ ಮಾಡಲು ಒತ್ತಾಯಿಸಿದ ಕಾರ್ಮಿಕರು ಧರಣಿ ಹಿಂಪಡೆದರು. ಬಳಿಕ ಅವರನ್ನು ವಾಸ್ತವ್ಯ ಇದ್ದ ಸ್ಥಳಗಳಿಗೆ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಕಳುಹಿಸಲಾಯಿತು.

ಅಂತರ ಮರೆತ ಐವನ್: ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಸ್ಥಳಕ್ಕೆ ಆಗಮಿಸಿ ಕಾರ್ಮಿಕರ ಮನವೊಲಿಸಲು ಪ್ರಯತ್ನಿಸಿದರು. ಐವನ್ ದೈಹಿಕ ಅಂತರ ಕಾಯ್ದುಕೊಳ್ಳದೆ ಕಾರ್ಮಿಕರ ಹೆಗಲಿಗೆ ಕೈಹಾಕಿಕೊಂಡು ಹೋಗುತ್ತಿದ್ದುದು ಟೀಕೆಗೆ ಗುರಿಯಾಗಿದೆ.

ಜೋಕಟ್ಟೆಯಲ್ಲೂ ಪ್ರತಿಭಟನೆ

ಸುರತ್ಕಲ್: ಆಹಾರ ವ್ಯವಸ್ಥೆ ಒದಗಿಸಬೇಕು ಮತ್ತು ಊರಿಗೆ ಹೋಗುವ ಅನುಕೂಲತೆ ಕಲ್ಪಿಸಬೇಕು ಎಂದು ಆಗ್ರಹಿಸಿ ಎಂಆರ್‌ಪಿಎಲ್‌ನ ಉತ್ತರ ಭಾರತದ ಸುಮಾರು 300 ಮಂದಿ ಗುತ್ತಿಗೆ ಕಾರ್ಮಿಕರು ಶುಕ್ರವಾರ ಜೋಕಟ್ಟೆ ಬಳಿಯ ಎಂಆರ್‌ಪಿಎಲ್ ಗೇಟ್ ಬಳಿ ಪ್ರತಿಭಟನೆ ನಡೆಸಿದರು. ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಎಂಆರ್‌ಪಿಎಲ್ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು. ಪಣಂಬೂರು ಪೊಲೀಸರು ಬಂದೋಬಸ್ತ್ ಆಯೋಜಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net