1200 ಕಾರ್ಮಿಕರು ಜಾರ್ಖಂಡ್ ಪ್ರಯಾಣ

railway new
Published on

ಮಂಗಳೂರು: ಹೊರರಾಜ್ಯದ ಕಾರ್ಮಿಕರನ್ನು ಕಳುಹಿಸಿ ಕೊಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿರುವ ಜಿಲ್ಲಾಡಳಿತ ಮೊದಲ ಹಂತದಲ್ಲಿ ಶನಿವಾರ ರಾತ್ರಿ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಿಂದ ಜಾರ್ಖಂಡ್‌ನ ಬೊಕಾರೊಗೆ 1200 ಕಾರ್ಮಿಕರನ್ನು ಕಳುಹಿಸಿದೆ. ಅವರು ಮೂರು ದಿನಗಳಲ್ಲಿ ತಲುಪುವ ಸಾಧ್ಯತೆ ಇದೆ. ಇನ್ನೆರಡು ದಿನಗಳಲ್ಲಿ ಬಿಹಾರಕ್ಕೆ ವಲಸೆ ಕಾರ್ಮಿಕರನ್ನು ಕಳುಹಿಸುವ ವ್ಯವಸ್ಥೆ ಆಗಲಿದೆ.

‘ಸೇವಾ ಸಿಂಧು’ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿರುವ ಕಾರ್ಮಿಕರಿಗೆ ಅಗತ್ಯ ಆರೋಗ್ಯ ಪರೀಕ್ಷೆ ಮಾಡಿಸಿ ಅವರು ವಾಸವಾಗಿದ್ದ ಕೂಳೂರು, ಬಜ್ಪೆ, ಕಾವೂರು ಮೊದಲಾದ ಕಡೆಯಿಂದ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಅವರನ್ನು ರೈಲ್ವೆ ನಿಲ್ದಾಣಕ್ಕೆ ಕರೆ ತರಲಾಯಿತು.

ವಲಸೆ ಕಾರ್ಮಿಕರು ಸ್ವತಃ ರೈಲು ನಿಲ್ದಾಣದ ಕಡೆಗೆ ಬರುವ ಅಗತ್ಯವಿಲ್ಲ. ಅವರಿರುವ ಸ್ಥಳದಿಂದ ವಾಹನದಲ್ಲಿ ಕರೆದುಕೊಂಡು ಬರಲಾಗುವುದು. ‘ಸೇವಾ ಸಿಂಧು’ವಿನಲ್ಲಿ ಮೊದಲು ನೋಂದಣಿ ಮಾಡಿದವರಿಗೆ ಆದ್ಯತೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.

ಹೊರರಾಜ್ಯದ ಎಲ್ಲ ಕಾರ್ಮಿಕರನ್ನು ಹಂತ ಹಂತವಾಗಿ ರೈಲು ಮೂಲಕ ಕಳುಹಿಸಲಾಗುವುದು. ತಪ್ಪು ಮಾಹಿತಿಗೆ ಕಿವಿಗೊಡಬೇಡಿ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ವಾರದೊಳಗೆ ಉತ್ತರ ಭಾರತ ಸೇರಿದಂತೆ ಅನ್ಯ ರಾಜ್ಯಗಳ ಕಾರ್ಮಿಕರನ್ನು ಕಳುಹಿಸಿ ಕೊಡುವ ವ್ಯವಸ್ಥೆ ಪೂರ್ಣಗೊಳ್ಳಲಿದೆ. ಕಾರ್ಮಿಕರಿಗೆ ದೈಹಿಕ ಅಂತರ ಪಾಲನೆ ಬಗ್ಗೆ ಮಾಹಿತಿ ನೀಡಲಾಗಿದೆ. ಊಟೋಪಚಾರ ವ್ಯವಸ್ಥೆಯನ್ನೂ ಒದಗಿಸಲಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net