

ತುಮಕೂರು: ಲಾಕ್‌ಡೌನ್ ಘೋಷಣೆಯಿಂದಾಗಿ ಜಿಲ್ಲೆಯಲ್ಲಿ ಬರೋಬ್ಬರಿ 5624 ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯ ಹತ್ತು ತಾಲೂಕುಗಳಲ್ಲಿ ಸಮೀಕ್ಷೆ ನಡೆಸಿರುವ ಜಿಲ್ಲಾಡಳಿತಕ್ಕೆ ಏ.6ರವರೆಗೆ 4455 ವಲಸೆ ಕಾರ್ಮಿಕರು ಹಾಗೂ 1169 ನಿರ್ಗತಿಕರು ಪತ್ತೆಯಾಗಿದ್ದು, ಅವರೆಲ್ಲರಿಗೂ ವಿವಿಧ ಭಾಗದಲ್ಲಿ ಊಟ, ವಸತಿ, ಸುರಕ್ಷತಾ ಸಾಮಗ್ರಿಗಳನ್ನು ಪೂರೈಸಲಾಗುತ್ತಿದೆ.
ಇನ್ನೂ ಸಾಕಷ್ಟು ಕಾರ್ಮಿಕರು ಅನಾಥರಾಗಿದ್ದು, ಅವರೆಲ್ಲರೂ ಅನ್ನಕ್ಕಾಗಿ ಪರದಾಡುತ್ತಿದ್ದಾರೆ. ಉತ್ತರ ಭಾರತದಿಂದ ಬಂದಿರುವ ಕಾರ್ಮಿಕರು ಭಾಷೆಯ ಸಮಸ್ಯೆಯಿಂದ ಸ್ಥಳೀಯರೊಂದಿಗೆ ಬೆರೆಯಲಾರದೆ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ಹಾಗೂ ಖಾಸಗಿ ಕಾಮಗಾರಿಗಳಿಗಾಗಿ ಜಿಲ್ಲೆಗೆ ಬಂದಿರುವ ಕ್ಯಾಂಪ್‌ಗಳು ಕಳೆದ ತಿಂಗಳಿನಿಂದ ಕೂಲಿ ಇಲ್ಲದೆ ಪರದಾಡುತ್ತಿವೆ. ಹೊರಪ್ರದೇಶದ ಕಾರ್ಮಿಕರ ಬಗ್ಗೆ ಸ್ಥಳೀಯರಲ್ಲಿಯೂ ಭಯವಿದ್ದು ಅವರಿಗೆ ನೆರವು ನೀಡಲು ಹಿಂದೆ, ಮುಂದೆ ನೋಡುತ್ತಿದ್ದಾರೆ.
ಕೂಲಿ ಇಲ್ಲದೆ, ಊಟವಿಲ್ಲದೆ ಪರಸ್ಥಳದಲ್ಲಿ ಬದುಕುತ್ತಿರುವ 5624 ಮಂದಿ ಕಾರ್ಮಿಕರಿಗೆ 10 ತಾಲೂಕುಗಳ 69 ಕೇಂದ್ರದಲ್ಲಿ ಜಿಲ್ಲಾಡಳಿತದ ವತಿಯಿಂದ ಸೌಲಭ್ಯ ನೀಡಲಾಗಿದೆ. ಜಿಲ್ಲಾಡಳಿತದ ಕಣ್ಣಿಗೆ ಕಾಣಿಸದ ಸಾಕಷ್ಟು ವಲಸೆ ಕಾರ್ಮಿಕರು ಅಲ್ಲಲ್ಲೇ ಸಂಕಷ್ಟದಲ್ಲಿದ್ದಾರೆ.
ಜಿಲ್ಲೆಯಲ್ಲಿ ವಿವಿಧ ಖಾಸಗಿ ಹಾಗೂ ಸರ್ಕಾರಿ ಕಾಮಗಾರಿಗಳಲ್ಲಿನ 5624 ವಲಸೆ ಕಾರ್ಮಿಕರನ್ನು ಗುರುತಿಸಲಾಗಿದ್ದು 69 ಕೇಂದ್ರದಲ್ಲಿ ಅವರಿಗೆ ಜಿಲ್ಲಾಡಳಿತ ವತಿಯಿಂದ ಊಟ, ಮಾಸ್ಕ್, ಸ್ಯಾನಿಟೈಸರ್ ನೀಡಲಾಗಿದೆ. ಸಂಕಷ್ಟದಲ್ಲಿರುವವರು ಕಂಡು ಬಂದರೆ ಕೂಡಲೇ ಜಿಲ್ಲಾಡಳಿತಕ್ಕೆ ತಿಳಿಸಬೇಕು. ಡಾ.ಕೆ.ರಾಕೇಶ್‌ಕುಮಾರ್ ಜಿಲ್ಲಾಧಿಕಾರಿ