ಲಾರಿಗಳಲ್ಲಿ ಕಾರ್ಮಿಕರ ಸಾಗಾಟ ಪತ್ತೆ

gundya new
Published on

ಉಪ್ಪಿನಂಗಡಿ: ಅಗತ್ಯ ವಸ್ತು ಸಾಗಾಟದ ಲಾರಿ ಎಂದು ಸ್ಟಿಕ್ಕರ್ ಅಳವಡಿಸಿ ಮಂಗಳೂರಿನಿಂದ ಉತ್ತರ ಭಾರತ ಮೂಲದ 120 ಕಾರ್ಮಿಕರನ್ನು ತುಂಬಿಕೊಂಡು ಹೊರಟಿದ್ದ ಹರ್ಯಾಣ ನೋಂದಣಿಯ ಎರಡು ಲಾರಿಗಳನ್ನು ಪೊಲೀಸರು ಗುಂಡ್ಯ ಚೆಕ್‌ಪೋಸ್ಟ್‌ನಲ್ಲಿ ತಡೆದಿದ್ದಾರೆ.

ಎರಡೂ ಲಾರಿಗಳಿಗೆ ಮೇಲ್ಭಾಗ ಟಾರ್ಪಲ್ ಹೊದಿಸಲಾಗಿದ್ದು, ತಪಾಸಣೆ ನಡೆಸಿದಾಗ ಒಳಗೆ ಕಾರ್ಮಿಕರು ಇರುವುದು ಪತ್ತೆಯಾಗಿದೆ. ತಕ್ಷಣ ಪೊಲೀಸರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದರು. ಬಳಿಕ ಕಾರ್ಮಿಕರನ್ನು ಗುಂಡ್ಯ ಪಿಲಿಕಜೆ ಶಾಲೆಗೆ ಕರೆದೊಯ್ಯಲಾಯಿತು. ಅಲ್ಲಿ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದ್ದರಿಂದ ಶಾಲೆ ಮುಂಭಾಗದಲ್ಲಿರುವ ದೈವಸ್ಥಾನಕ್ಕೆ ಸಂಬಂಧಿಸಿದ ಮೈದಾನಕ್ಕೆ ಕಾರ್ಮಿಕರನ್ನು ಕರೆದೊಯ್ದು ಸುಬ್ರಹ್ಮಣ್ಯ ದೇವಸ್ಥಾನದಿಂದ ಉಪಾಹಾರ, ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಯಿತು.

ಮಧ್ಯಾಹ್ನದ ವೇಳೆಗೆ ಸ್ಥಳಕ್ಕೆ ಪುತ್ತೂರು ಸಹಾಯಕ ಕಮಿಷನರ್ ಡಾ.ಯತೀಶ್ ಉಳ್ಳಾಲ್ ಆಗಮಿಸಿದರು. ಈ ವೇಳೆ ಮಾತನಾಡಿದ ಕಾರ್ಮಿಕರು, ಮಂಗಳೂರಿಗೆ ಬಟ್ಟೆ ವ್ಯಾಪಾರಕ್ಕೆಂದು ಬಂದಿದ್ದ ನಾವು ಒಂದೂವರೆ ತಿಂಗಳಿನಿಂದ ಕೆಲಸವೂ ಇಲ್ಲದೆ ಹಣವೂ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದೇವೆ. ನಮ್ಮನ್ನು ಊರಿಗೆ ಕಳುಹಿಸಿಕೊಡಿ ಎಂದು ಪಟ್ಟು ಹಿಡಿದರು. ಒಪ್ಪದ ಸಹಾಯಕ ಕಮಿಷನರ್, ಜಿಲ್ಲಾಡಳಿತದಿಂದ ಅನುಮತಿ ದೊರೆತ ಬಳಿಕ ಊರಿಗೆ ಕಳುಹಿಸಲಾಗುವುದು. ಅಲ್ಲಿ ತನಕ ಮಂಗಳೂರಿನಲ್ಲಿ ವಾಸ್ತವ್ಯ, ಊಟಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿ ಮೂರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಂಗಳೂರಿಗೆ ಕಳುಹಿಸಿದರು.

ಅನುಮತಿ ಇಲ್ಲದೆ ಕಾರ್ಮಿಕರನ್ನು ಸಾಗಿಸುತ್ತಿದ್ದ ಲಾರಿಗಳನ್ನು ವಶಕ್ಕೆ ಪಡೆಯಲು ಪೊಲೀಸರಿಗೆ ಎಸಿ ಸೂಚಿಸಿದ್ದಾರೆ.

ಡಿವೈಎಸ್‌ಪಿ ದಿನಕರ ಶೆಟ್ಟಿ, ಉಪ್ಪಿನಂಗಡಿ ಎಸ್.ಐ.ಈರಯ್ಯ, ಕಡಬ ತಹಸೀಲ್ದಾರ್ ಜಾನ್‌ಪ್ರಕಾಶ್, ಕಂದಾಯ ನಿರೀಕ್ಷಕ ಅವಿನ್, ಶಿರಾಡಿ ಗ್ರಾಮಕರಣಿಕ ಸಂತೋಷ್, ತಾ.ಪಂ. ಸದಸ್ಯೆ ಆಶಾ ಲಕ್ಷ್ಮಣ್, ಕೊಂಬಾರು ಗ್ರಾ.ಪಂ. ಪಿಡಿಒ ರಾಘವೇಂದ್ರ ಗೌಡ, ಸದಸ್ಯ ಪುರುಷೋತ್ತಮ ಗೌಡ, ಸಿಬ್ಬಂದಿ ಜನಾರ್ದನ, ಅಶ್ವತ್ಥ್, ಆಶಾ ಕಾರ್ಯಕರ್ತೆ ಲಲಿತಾ ಮತ್ತಿತರರು ಕಾರ್ಮಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net