

ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಬಾಕಿಯಾಗಿರುವ ವಲಸೆ ಕಾರ್ಮಿಕರು ಹಾಗೂ ಇತರ ಸಾಮಾನ್ಯ ವರ್ಗದ ಜನರು ಕೆಎಸ್ಸಾರ್ಟಿಸಿ ಬಸ್ ಮೂಲಕ ಸೋಮವಾರ ತಮ್ಮೂರಿಗೆ ಪ್ರಯಾಣಿಸಿದರು.
ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದಿಂದ ಕೂಳೂರು ಗೋಲ್ಡ್ಫಿಂಚ್ ಮೈದಾನ ಹಾಗೂ ಮೂಲ್ಕಿಯಿಂದ ಒಟ್ಟು 60, ಉಡುಪಿಯಿಂದ 30, ಕೊಡಗು ಒಳಗೊಂಡಿರುವ ಪುತ್ತೂರು ವಿಭಾಗದಿಂದ ಒಟ್ಟು 83 ಬಸ್‌ಗಳು ಪ್ರಯಾಣಿಸಿವೆ.
ಮಂಗಳೂರಿನಿಂದ ಬೆಂಗಳೂರಿಗೆ ನಾಲ್ಕು ಬಸ್‌ಗಳು ಮಾತ್ರ ಸಂಚರಿಸಿದ್ದು, ಹೆಚ್ಚಿನ ಬಸ್‌ಗಳು ಉತ್ತರ ಕರ್ನಾಟಕಕ್ಕೆ ಹೊರಟಿವೆ.
ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಮೇಯರ್ ದಿವಾಕರ್ ಗೋಲ್ಡ್ ಫಿಂಚ್ ಮೈದಾನಕ್ಕೆ ಭೇಟಿ ನೀಡಿ ಸಂಚಾರ ವ್ಯವಸ್ಥೆ ಪರಿಶೀಲಿಸಿದರು.
ಮನಪಾ ಮುಂಭಾಗ ಜನ ಜಾತ್ರೆ: ಮಂಗಳೂರು ಲಾಲ್‌ಭಾಗ್‌ನಲ್ಲಿರುವ ನಗರಪಾಲಿಕೆ ಕಚೇರಿ ಮುಂಭಾಗ ಸೋಮವಾರ ಜನ ಜಾತ್ರೆಯೇ ಸೇರಿತ್ತು. ಹೊರಜಿಲ್ಲೆ, ಹೊರ ರಾಜ್ಯದ ಕಾರ್ಮಿಕರು ತಮ್ಮ ಊರಿಗೆ ತೆರಳಲು ನೋಂದಣಿ ಮಾಡಿಸಿಕೊಳ್ಳುವ ನಿಟ್ಟಿನಲ್ಲಿ ನೂರಾರು ಸಂಖ್ಯೆಯಲ್ಲಿ ಬಂದಿದ್ದರು. ಯಾರೊಬ್ಬರೂ ಸಾಮಾಜಿಕ ಅಂತರ ಪಾಲಿಸಿಲ್ಲ, ಮಾಸ್ಕ್ ಕೂಡ ಧರಿಸಿರಲಿಲ್ಲ.
15,900 ಕಾರ್ಮಿಕರ ಪಯಣ: ದ.ಕ, ಉಡುಪಿ ಜಿಲ್ಲೆಯಿಂದ ಈಗಾಗಲೇ 450 ಕೆಎಸ್ಸಾರ್ಟಿಸಿ ಹಾಗೂ 80 ಖಾಸಗಿ ಬಸ್‌ಗಳಲ್ಲಿ ವಲಸೆ ಕಾರ್ಮಿಕರು ತೆರಳಿದ್ದಾರೆ. ಸುಮಾರು 15,900 ಕಾರ್ಮಿಕರು ಈಗಾಗಲೇ ತವರಿಗೆ ಮರಳಿದ್ದಾರೆ.
ಊರಿಗೆ ತೆರಳಿದ ಬಳಿಕ ಸದ್ಯ ಮತ್ತೆ ಮಂಗಳೂರಿಗೆ ವಾಪಸಾಗುವ ಆಲೋಚನೆಯಿಲ್ಲ. ಅವರಿಗೆ ಊರಿನಲ್ಲಿ ಒಂದು ಎಕರೆಯಷ್ಟು ಭೂಮಿ ಇದೆ. ಅದರಲ್ಲಿ ಜೋಳ ಬೆಳೆಯುತ್ತಾರೆ. ಮನೆಯ ವರ್ಷದ ಖರ್ಚಿಗಾಗುವಷ್ಟು ಜೋಳ ಜಮೀನಿನಲ್ಲೇ ಬೆಳೆಯಬಹುದು. ಬಿಪಿಎಲ್ ಕಾರ್ಡ್ ಹೊಂದಿದ್ದು, ಉಚಿತ ಅಕ್ಕಿ ದೊರೆಯುತ್ತದೆ. ಇತರ ಖರ್ಚಿಗೆ ಕೂಲಿ ಮಾಡಬೇಕು. - ಧೀರಜ್, ವಲಸೆ ಕಾರ್ಮಿಕ, ಬಾದಾಮಿ