

ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್‌ನ ಹೈಡ್ರೋಲಿಕ್ ಘಟಕದಲ್ಲಿ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಉತ್ತರ ಭಾರತದ ವಲಸೆ ಕಾರ್ಮಿಕ ಅಪಘಡದಲ್ಲಿ ಬಲಿಯಾಗಿದ್ದಾರೆ.
ಝಾರ್ಖಂಡ್‌ನ ರಾಂಚಿ ಜಿಲ್ಲೆಯ ಚಾಚಕೋಫಿ ನಿವಾಸಿ ಮಂಗ್ರ ಒರಾನ್ (38) ಮೃತಪಟ್ಟವರು. ಕಳೆದ 10 ವರ್ಷಗಳಿಂದ ಜೆಸಿ ಇಂಜಿನಿಯರಿಂಗ್ ಗುತ್ತಿಗೆ ಸಂಸ್ಥೆಯಡಿ ಪಿಟ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಸೋಮವಾರ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾಗ ಮಂಗಳವಾರ ಬೆಳಗ್ಗಿನ ಜಾವ 2.15ರ ವೇಳೆಗೆ ಹೈಡ್ರೋಲಿಕ್ ಘಟಕದ ಮೂರನೇ ಮಹಡಿಯಿಂದ ನೆಲಕ್ಕೆ ಆಯ ತಪ್ಪಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಶ್ರೀನಿವಾಸ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ.
ಜೆಸಿ ಇಂಜಿನಿಯರಿಂಗ್ ಗುತ್ತಿಗೆ ಸಂಸ್ಥೆ, ಎಂಆರ್‌ಪಿಎಲ್ ಮತ್ತು ಜೆಸಿ ಇಂಜಿಯರಿಂಗ್ ಕಂಪನಿಯ ಸುರಕ್ಷತಾ ಅಧಿಕಾರಿಗಳು ಹಾಗೂ ಜೆಸಿ ಇಂಜಿನಿಯರಿಂಗ್ ಸೈಟ್ ವರ್ಕ್‌ನ ಮೇಲ್ವಿಚಾರಕ ಸಾಯಿನಾಥ್ ವಿರುದ್ಧ ಸೂಕ್ತ ಸುರಕ್ಷತಾ ಕ್ರಮ ಅಳವಡಿಸದೆ ಕೆಲಸ ಮಾಡಿಸಿದ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟಿ ರೂ. ಪರಿಹಾರಕ್ಕೆ ಆಗ್ರಹ: ಉತ್ತರ ಭಾರತದ ವಲಸೆ ಕಾರ್ಮಿಕರನ್ನು ಗುತ್ತಿಗೆ ಕಂಪೆನಿಗಳ ಮೂಲಕ ಕರೆ ತಂದು ಕಡಿಮೆ ವೇತನಕ್ಕೆ ಎಂಆರ್‌ಪಿಎಲ್‌ನಲ್ಲಿ ಕೆಲಸ ಮಾಡಿಸಲಾಗುತ್ತಿದೆ. ಕೆಲಸದ ಸಂರ್ಭ ಯಾವುದೇ ಜೀವ ರಕ್ಷಕ ಸಾಧನಗಳನ್ನು ಅಳವಡಿಸುವುದಿಲ್ಲ. ಗುತ್ತಿಗೆ ಕಂಪನಿಯ ನಿರ್ಲಕ್ಷೃದಿಂದ ಕಾರ್ಮಿಕನ ಸಾವು ಸಂಭವಿಸಿದೆ. ಆತನ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಬೇಕು. ಕಂಪೆನಿ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸುರತ್ಕಲ್ ನಾಗರಿಕ ಹೋರಾಟ ಸಮಿತಿ ಒತ್ತಾಯಿಸಿದೆ.