

ಸೋಮವಾರಪೇಟೆ : ಮಾನ್ಸೂನ್ ಮಡ್ವೆಂಚರ್ ಡ್ರೈವ್-2024ರ ವತಿಯಿಂದ ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಬೆಟ್ಟದಳ್ಳಿ ಹಾಗೂ ಶಾಂತಳ್ಳಿ ಭಾಗದಲ್ಲಿ ಮಡ್ವೆಂಚರ್ ಡ್ರೈವ್ ರ‌್ಯಾಲಿ ನಡೆಯಿತು.
ರಾಜ್ಯದ ವಿವಿಧ ಭಾಗಗಳಿಂದ, ನೆರೆಯ ಕೇರಳ, ತಮಿಳುನಾಡಿನಿಂದಲೂ ಆಗಮಿಸಿದ್ದ ಜೀಪ್‌ಗಳು ಕೆಸರುಮಯ ರಸ್ತೆಯಲ್ಲಿ ಸಾಗಿ ಸಾಹಸಮಯ ಚಾಲನೆಯ ಸವಾಲನ್ನು ಸಮರ್ಥವಾಗಿ ಎದುರಿಸಿದವು.
ಇದಕ್ಕೂ ಮುನ್ನ ಶಾಂತಳ್ಳಿ ಶ್ರೀಕುಮಾರಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ ಮಾನ್ಸೂನ್ ಮಡ್ವೆಂಚರ್ ಡ್ರೈವ್‌ಗೆ ಪ್ರಮುಖರು ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಮಾಜಿ ಎಂಎಲ್‌ಸಿ ಎಸ್.ಜಿ. ಮೇದಪ್ಪ, ತಾಲೂಕಿನಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಹೆಚ್ಚಿನ ಯೋಜನೆಗಳ ಅಗತ್ಯವಿದೆ. ಪರಿಸರಕ್ಕೆ ಪೂರಕವಾದ ಪ್ರವಾಸೋದ್ಯಮದಿಂದ ಅಭಿವೃದ್ಧಿಯನ್ನೂ ನಿರೀಕ್ಷಿಸಬಹುದಾಗಿದೆ ಎಂದು ಅಭಿಪ್ರಾಯಿಸಿದರು.
ತಾ.ಪಂ. ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್ ಮಾತನಾಡಿ, ಗ್ರಾಮೀಣ ಭಾಗದ ರೈತರು ತಮ್ಮ ತೋಟ, ಗದ್ದೆಗಳಿಗೆ ತೆರಳಲು ರಸ್ತೆಯ ಸಮಸ್ಯೆ ಇದ್ದು, ಇಂತಹ ಸಾಹಸಮಯ ಚಾಲನೆಗಾಗಿ ರಸ್ತೆ ನಿರ್ಮಿಸುವುದರಿಂದ ಸ್ಥಳೀಯರಿಗೂ ಅನುಕೂಲವಾಗುತ್ತದೆ ಎಂದರು.
ಮಾನ್ಸೂನ್ ಮಡ್ವೆಂಚರ್ ಡ್ರೈವ್‌ನಲ್ಲಿ 80ಕ್ಕೂ ಅಧಿಕ ವಾಹನಗಳು ಭಾಗಿಯಾಗಿದ್ದವು. ಹಲವಷ್ಟು ವಾಹನಗಳು ಕೆಸರಿನ ಹೊಂಡಗಳಲ್ಲಿ ಸಿಲುಕಿಕೊಂಡ ಸಂದರ್ಭ ಟ್ರ್ಯಾಕ್ಟರ್‌ಗಳ ಮೂಲಕ ಹೊರಗೆಳೆಯಲಾಯಿತು.
ಶಾಂತಳ್ಳಿ, ಬೆಟ್ಟದಳ್ಳಿ ಭಾಗದಲ್ಲಿರುವ ಅರಣ್ಯ ಇಲಾಖೆಗೆ ಸೇರಿದ ಸ್ಥಳದ ಮೂಲಕ ಹಾದುಹೋಗಿದ್ದ ರಸ್ತೆಯಲ್ಲಿ ಸಾಹಸಮಯ ಚಾಲನೆಗೆ ಅರಣ್ಯಾಧಿಕಾರಿಗಳು ತಡೆಯೊಡ್ಡಿದರು. ಎರಡೂ ಬದಿಯಲ್ಲಿ ಸ್ಥಳೀಯರ ತೋಟ, ನಡುವೆ ಅರಣ್ಯ ಇಲಾಖೆಗೆ ಸೇರಿದ ಜಾಗವಿದ್ದ ಸ್ಥಳಗಳಲ್ಲಿ ಅಡ್ವೆಂಚರ್ ಡ್ರೈವ್‌ಗೆ ಅವಕಾಶ ನೀಡಲಿಲ್ಲ.