ಗುಣಮಟ್ಟದ ಬಿಸಿಯೂಟದಿಂದ ಶಾಲಾ ಮಕ್ಕಳ ಸಮರ್ಪಕ ಬೆಳವಣಿಗೆ ಸಾಧ್ಯ: ಡಾ. ಜನಗಿ

23GDG02
Published on

ಗದಗ: ಶಾಲಾ ಮಕ್ಕಳಿಗೆ ಶುಚಿ ಹಾಗೂ ರುಚಿಕರ ಗುಣಮಟ್ಟದ  ಬಿಸಿಯೂಟ ಪೂರೈಕೆ ಮಾಡುವುದರಿಂದ ಮಕ್ಕಳಲ್ಲಿ ಸಮರ್ಪಕ ಬೆಳವಣಿಗೆ ಕಾಣಬಹುದಾಗಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ. ಜನಗಿ ತಿಳಿಸಿದರು.

ಗದಗ ತಾಲೂಕು ಪಂಚಾಯತ್ ಸಭಾಂಗಣದಲ್ಲಿ  ಬುಧವಾರದಂದು ಪಿಎಂ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆ ಹಾಗೂ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಬೆಂಗಳೂರು ಇವರ ಸಹಯೋಗದಲ್ಲಿ ಅಡುಗೆಯವರಿಗೆ ಸುರಕ್ಷತೆ ಮತ್ತು ಸ್ವಚ್ಛತೆ ಕುರಿತು ಜರುಗಿದ ತರಬೇತಿ  ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಕಾರ್ಯಕ್ರಮವು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹಾತ್ವಾಕಾಂಕ್ಷಿ ಯೋಜನೆಯಾಗಿದೆ. ಬಿಸಿಯೂಟದ ಅಡುಗೆಯವರು ಶಿಸ್ತು ಹಾಗೂ  ಸ್ವಚ್ಛತೆ ಕಾಯ್ದುಕೊಂಡು ಮಕ್ಕಳಿಗೆ ಬಿಸಿಯೂಟ ತಯಾರಿಸುವಲ್ಲಿ ಹೆಚ್ಚಿನ ನಿಗಾ ವಹಿಸಬೇಕು. ಬಿಸಿಯೂಟ ತಯಾರು ಮಾಡುವ ಸಂದರ್ಭದಲ್ಲಿ  ಅನಾಹುತಗಳು ಸಂಭವಿಸದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು.  ಮಕ್ಕಳಿಗೆ ಶುಚಿ ಹಾಗೂ ರುಚಿ ಬಿಸಿಯೂಟ ವಿತರಿಸಿ ಮಕ್ಕಳ ಸ್ನೇಹಿ ವಾತಾವರಣ ಸೃಷ್ಟಿಸುವುದು ಮುಖ್ಯವಾಗಿದೆ ಎಂದು ತಿಳಿಸಿದರು.  

ಸಂಪನ್ಮೂಲ ವ್ಯಕ್ತಿಗಳಾಗಿ ಎಮ್.ಎಮ್. ನಿಂಬನಾಯ್ಕರ್ , ಕೆ.ಎ.ಕೌಜಗೇರಿ ಅವರು ಮಾತನಾಡಿ ಅಡುಗೆ ಕೋಣೆ ಸ್ವಚ್ಛ ಇರುವಂತೆ ನೋಡಿಕೊಳ್ಳಬೇಕು. ಬಿಸಿಯೂಟ ಪೂರ್ಣಗೊಂಡ ನಂತರ  ಪಾತ್ರೆಗಳನ್ನು ಸ್ವಚ್ಛ ಪರಿಕರಗಳಿಂದ ಸುರಕ್ಷಿತವಾಗಿ ಮುಚ್ಚಬೇಕು. ಅಡುಗೆಯನ್ನು ವಿತರಿಸುವಾಗ ಮಕ್ಕಳಲ್ಲಿ ನೂಕು ನುಗ್ಗಲಾಗದಂತೆ ಕ್ರಮ ವಹಿಸಿ ಸರದಿ ಪ್ರಕಾರ ಊಟ ವಿತರಿಸಿದರೆ ಶಾಂತಿ ಕಾಪಾಡಬಹುದಾಗಿದೆ ಎಂದ ಅವರು ಬಿಸಿಯೂಟ ತಯಾರಿಕೆ ಹಾಗೂ ವಿತರಣೆಗೆ ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳನ್ನು ವಿವರಿಸಿದರು.    

ತರಬೇತಿಯಲ್ಲಿ  ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ  ಕೊಟ್ರೇಶ ವಿಭೂತಿ, ಬಿಸಿಯೂಟ ಅಡುಗೆ ತಯಾರುಕರು, ಸಹಾಯಕರು  ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net