

ಮುಳಬಾಗಿಲು: ತಾಲೂಕಿನ ಆಂಧ್ರ ಗಡಿಗೆ ಹೊಂದಿಕೊಂಡಿರುವ ಎಂ.ಗೊಲ್ಲಹಳ್ಳಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹಸಿರು ಮಿಡತೆಗಳು ಬೆಳೆಗಳ ಮೇಲೆ ದಾಳಿ ಮಾಡಿ ನಾಶಮಾಡುತ್ತಿದ್ದು ರೈತರಲ್ಲಿ ಆತಂಕ ಸೃಷ್ಟಿಸಿವೆ.
ಎಂ.ಗೊಲ್ಲಹಳ್ಳಿಯ ರಾಮಚಂದ್ರಪ್ಪ, ನಾಗರಾಜ್, ಶ್ರೀನಿವಾಸ್ ಎಂಬುವರು ತೋಟಗಳಲ್ಲಿ ಫಾರಂ ಹುಲ್ಲು ಬೆಳೆದಿದ್ದು, ಈ ಹುಲ್ಲಿಗೆ ಹಸಿರು ಮಿಡತೆಗಳು ದಾಳಿ ಮಾಡಿ ಬೆಳೆ ರಸ ಹೀರುತ್ತಿದ್ದು, ಆತಂಕಗೊಂಡ ರೈತರು ಬೈರಕೂರಿನ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ.
ಸಹಾಯಕ ಕೃಷಿ ಅಧಿಕಾರಿಗಳಾದ ಕಾವ್ಯಾ ಮತ್ತು ಲೋಕರಾಜ್ ತೋಟಕ್ಕೆ ಭೇಟಿ ನೀಡಿ ಮಿಡತೆಗಳ ಹಾವಳಿ ತಡೆಗಟ್ಟಲು ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ಅವರ ಶಿಫಾರಸಿನ ಮೇರೆಗೆ ಔಷಧ ಸಿಂಪಡಣೆ ಮಾಡಿಸಿದ್ದು, ಶನಿವಾರ ಗ್ರಾಮಕ್ಕೆ ಕೃಷಿ ಮತ್ತು ಕೀಟ ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲಿಸುವ ಸಾಧ್ಯತೆ ಇದೆ. ಮಿಡತೆ ಹಾವಳಿ ಹೆಚ್ಚಾದರೆ ತೋಟಗಾರಿಕೆ ಬೆಳೆಗಳಿಗೂ ಹಾನಿಯಾಗುವ ಸಾಧ್ಯತೆ ಇದೆ.
ಶುಕ್ರವಾರ ಜಾನುವಾರುಗಳಿಗೆ ಮೇವು ತರಲು ಹೋದಾಗ ಸಾವಿರಾರು ಸಂಖ್ಯೆಯಲ್ಲಿ ಮಿಡತೆಗಳು ರಸ ಹೀರುತ್ತಿರುವುದು ಕಂಡು ಬಂದಿದೆ. ಇವುಗಳನ್ನು ನಿಯಂತ್ರಣ ಮಾಡದಿದ್ದಲ್ಲಿ ಬೆಳೆ ನಷ್ಟವಾಗಲಿದೆ. ಎಂ.ಗೋಪಾಲ್, ರೈತ ಮುಖಂಡ, ಮುಳಬಾಗಿಲು ರೈತರು ಈಗಾಗಲೆ ಸಂಕಷ್ಟದಲ್ಲಿದ್ದು, ಹಸಿರು ಮಿಡತೆಗಳ ಹಾವಳಿ ಹೆಚ್ಚಾಗಿದೆ. ಇವುಗಳ ನಿಯಂತ್ರಣಕ್ಕೆ ಸರ್ಕಾರ ವಿಶೇಷ ಕ್ರಮ ಕೈಗೊಳ್ಳಬೇಕು. ಬಿ.ಉದಯ್‌ಕುಮಾರ್ ರೆಡ್ಡಿ, ಎಂ.ಗೊಲ್ಲಹಳ್ಳಿ ಗ್ರಾಮಸ್ಥ