

ಮಡಿಕೇರಿ: ರಾಜ್ಯ ಸರ್ಕಾರ ಬಿಸಿಯೂಟ ನೌಕರರನ್ನು ನಿವೃತ್ತಿ ಸೌಲಭ್ಯ ನೀಡದೇ ಕೆಲಸದಿಂದ ವಜಾಗೊಳಿಸಿರುವುದನ್ನು ಖಂಡಿಸಿ ಜಿಲ್ಲೆಯಾಧ್ಯಂತ ಬಿಸಿಯೂಟ ನೌಕರರು ಆ೧೬ ರಂದು ಅಡುಗೆ ಬಂದ್ ಮಾಡಿ ಪ್ರತಿಭಟನೆ ನಡೆಸಲಿದೆ ಎಂದು ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಕೆ.ಎ.ಪ್ರಮೀಳಾ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ೨೦ ವರ್ಷದಿಂದ ಬಿಸಿಯೂಟ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಆದರೆ, ಇತ್ತೀಚೆಗೆ ರಾಜ್ಯ ಸರ್ಕಾರ ೬೦ ವರ್ಷ ವಯಸ್ಸಾದವರನ್ನು ಕೆಲಸದಿಂದ ವಜಾ ಮಾಡಿದೆ. ಇದರಿಂದ ನಮ್ಮ ಬದುಕು ಸಂಕಷ್ಟದಲ್ಲಿದೆ. ಆದ್ದರಿಂದ ಸರ್ಕಾರದಿಂದ ಪಿಂಚಣಿ ಅಥವಾ ಗ್ರ್ಯಾಚ್ಯುಟಿ ಕೂಡಲೇ ಜಾರಿ ಮಾಡಬೇಕು ಎಂದು ಆಗ್ರಹಿಸಿ ಆ.೧೪ ರಂದು ರಾಜ್ಯದಲ್ಲಿ ಪ್ರತಿಭಟನೆ ನಡೆಯಲಿದೆ. ಜಿಲ್ಲೆಯಲ್ಲಿ ಆ೧೬ರಂದು ಅಡುಗೆ ಬಂದ್ ಮಾಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಬಿಸಿಯೂಟ ನೌಕರರು ಸಹಕಾರ ನೀಡಬೇಕು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಎಚ್.ಯು.ಕುಸುಮ, ಸಿಐಟಿಯು ಕಾರ್ಯದರ್ಶಿ ಎ.ಸಿ.ಸಾಬು, ಸಂಘದ ಖಚಾಂಜಿ ಕಾವೇರಿ ಉಪಸ್ಥಿತರಿದ್ದರು.