ವಿವಿಧ ಬೇಡಿಕೆ ಈಡೇರಿಸಲು ಬಿಸಿಯೂಟ ತಯಾರಕರ ಆಗ್ರಹ

17mnd2 phpto.
Published on

ಮುಂಡಗೋಡ: 2025-2026ರ ಬಜೆಟ್‌ನಲ್ಲಿ ಬಿಸಿಯೂಟ ತಯಾರಕರಿಗೆ ವೇತನ ಹೆಚ್ಚಿಸುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಬಿಸಿಯೂಟ ತಯಾರಕರ ಫೇಡರೇಶನ್‌ನಿಂದ ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕಳೆದ 23ವರ್ಷಗಳಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಸೇರಿದಂತೆ ಕಿರಿಯ, ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಬಿಸಿಯೂಟ ತಯಾರಕ ಮಹಿಳೆಯರು ಕಡಿಮೆ ಗೌರವ ಸಂಭಾವನೆಗೆ ದುಡಿಯುತ್ತಿದ್ದಾರೆ. ಮುಖ್ಯ ಅಡುಗೆಯವರಿಗೆ ಮಾಸಿಕ ರೂಪಾಯಿ 3700 ಹಾಗೂ ಸಹಾಯಕ ಅಡುಗೆಯವರಿಗೆ ರೂಪಾಯಿ 3600 ಗೌರವ ಸಂಭಾವನೆ ಬರುತ್ತಿದ್ದು, ಇದರಿಂದ ಬಿಸಿಯೂಟ ತಯಾರಕರು ಜೀವನ ನಡೆಸುವುದು ಕಷ್ಟಕರವಾಗಿದೆ. ಮಾಸಿಕ 6,000 ರೂ. ಜಾರಿಗೊಳಿಸಬೇಕು. ನಿವೃತ್ತರಾದ ಬಿಸಿಯೂಟ ತಯಾರಕರಿಗೆ ಈಗಾಗಲೇ ಇಲಾಖೆ ಘೋಷಣೆ ಮಾಡಿರುವುದನ್ನು ಬದಲಾಯಿಸಿ ಇಡುಗಂಟು ಹಣವನ್ನು ಕನಿಷ್ಠ ಎರಡು ಲಕ್ಷ ರೂಪಾಯಿಗಳಿಗೆ ಏರಿಸಬೇಕು. ಯೋಜನೆ ಆರಂಭವಾದಾಗಿನಿಂದ ರಾಜ್ಯದಲ್ಲಿ 15ಕ್ಕೂ ಹೆಚ್ಚು ಜನ ಬಿಸಿಯೂಟ ತಯಾರಕರು ಶಾಲೆಯಲ್ಲಿ ಅಡುಗೆ ತಯಾರಿಸುವಾಗ ಕುಕ್ಕರ್ ಸ್ಫೋಟಗೊಳ್ಳುವುದು ಸೇರಿದಂತೆ ವಿವಿಧ ರೀತಿಯ ಅವಘಡಗಳಾಗಿ ಮೃತರಾಗಿದ್ದಾರೆ. ಅಂತಹ ಕುಟುಂಬದವರಿಗೆ ಇದುವರೆಗೂ ಯಾವುದೇ ಪರಿಹಾರ ನೀಡಿಲ್ಲ. ಕೂಡಲೇ ಬಿಸಿಯೂಟ ತಯಾರಕರಿಗೆ ಪರಿಹಾರವಾಗಿ 10 ಲಕ್ಷ ರೂಪಾಯಿ ಜಾರಿಗೊಳಿಸಬೇಕು. ಪರಿಹಾರ ಶಾಲೆಯಲ್ಲಿ ಅಡುಗೆ ತಯಾರಿಸುವ ಸಂದರ್ಭದಲ್ಲಿ ಕುಕ್ಕರ್ ಸ್ಫೋಟ ಮತ್ತು ಯಾವುದೇ ರೀತಿಯ ಅಪಘಾತಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಕ್ಕೆ ಕನಿಷ್ಠ 50 ಸಾವಿರ ರೂಪಾಯಿವರೆಗೂ ಚಿಕಿತ್ಸೆಗಾಗಿ ಆಸ್ಪತ್ರೆ ವೆಚ್ಚ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ತಾಪಂ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು. ಉಪಾಧ್ಯಕ್ಷ ಪರಮೇಶ್ವರ ಹೊಸಕೊಪ್ಪ, ತಾಲೂಕು ಅಧ್ಯಕ್ಷೆ ಜರೀನಾ ಕೆ.ಟಿ., ಕಾರ್ಯದರ್ಶಿ ಗೀತಾ ದೇವಡಿಗ, ಸಂಚಾಲಕಿ ಚಂದ್ರಕಾಂತ ಎಸ್., ಬಿಸಿಯೂಟ ಕಾರ್ಯಕರ್ತೆಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net