

ಹುಬ್ಬಳ್ಳಿ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭೆ ಎಸಿ ರೂಮ್ನಲ್ಲಿ ಕುಳಿತು ಸಭೆ ಮಾಡಿದರೆ ಮೈಕ್ರೋ ಫೈನಾನ್ಸ್ಗೆ ಕಡಿವಾಣ ಬೀಳುವುದಿಲ್ಲ. ಇದಕ್ಕಾಗಿ ಕಠಿಣ ಕಾನೂನು ಜಾರಿಗೆ ತರಬೇಕಾಗುತ್ತದೆ ಎಂದು ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಜನರು ಸ್ವಂತ ಊರು ತೊರೆಯುತ್ತಿದ್ದಾರೆ. ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ, ಮಹಿಳೆಯರು ಮಾಂಗಲ್ಯ ಸರ ಮಾರಾಟ ಮಾಡುವ ದುಸ್ಥಿತಿಯನ್ನು ರಾಜ್ಯ ಸರ್ಕಾರ ತಂದಿದೆ ಎಂದು ದೂರಿದರು.
ಮೈಕ್ರೋ ಫೈನಾನ್ಸ್ ನಿಯಂತ್ರಣಕ್ಕೆ ಕಡಿವಾಣ ಹಾಕದಿರಲು ಪ್ರಮುಖ ಕಾರಣವೆಂದರೆ ಮುಗಿಲು ಮುಟ್ಟಿರುವ ಭ್ರಷ್ಟಾಚಾರ. ಹೆಚ್ಚು ಭ್ರಷ್ಟಾಚಾರದ ಹಣ ಬರುವ ಪೊಲೀಸ್ ಠಾಣೆಗಳಿಗೆ ವರ್ಗಾವಣೆಗಾಗಿ ಅಧಿಕಾರಿಗಳು ಕೋಟ್ಯಂತರ ರೂಪಾಯಿ ನೀಡುತ್ತಿದ್ದಾರೆ. ಹೀಗೆ ನೀಡಿದ ಹಣ ವಾಪಸ್ಸು ಪಡೆಯಲು ಪೊಲೀಸ್ ಅಧಿಕಾರಿಗಳು ಕಳ್ಳರು, ಡ್ರಗ್ ಡೀಲರ್ಗಳು, ಮೀಟರ್ ಬಡ್ಡಿ ದಂದೆಕೋರರು, ಪ್ರಾಸ್ಟಿಟ್ಯೂಟ್ಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹೀಗಾಗಿ, ನೊಂದ ಜನರಿಗೆ ಪೊಲೀಸ್ ಠಾಣೆಯಲ್ಲಿ ರಕ್ಷಣೆಯಾಗಲಿ, ನ್ಯಾಯವಾಗಲಿ ಸಿಗುತ್ತಿಲ್ಲ. ಪೊಲೀಸ್ ಅಧಿಕಾರಿಗಳಿಂದ ನ್ಯಾಯ ನಿರೀಕ್ಷಿಸುವುದು ಕಷ್ಟಕರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕನ್ನಡ ನಾಡಿಗೆ ಅಪಾರ ಕೊಡುಗೆ ನೀಡಿರುವ ಮೈಸೂರು ರಾಜಮನೆತನದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ರಾಜಮನೆತನದ ಆಸ್ತಿ ಲೂಟಿ ಮಾಡುತ್ತಿರುವ ಮುಖ್ಯಮಂತ್ರಿಗೆ ನಾಚಿಕೆ ಆಗಬೇಕು ಎಂದರು.
ಬೆಂಗಳೂರು ಅರಮನೆ ಮೈದಾನವನ್ನು ಸಿಎಂ ಸಿದ್ದರಾಮಯ್ಯ ಮುಟ್ಟುಗೋಲು ಹಾಕಲು ಈ ಹಿಂದೆ ಪ್ರಯತ್ನಿಸಿದ್ದರು. ಇದೀಗ ಮತ್ತೆ ಇದಕ್ಕಾಗಿ ಸುಗ್ರಿವಾಜ್ಞೆ ಹೊರಡಿಸುವ ಯತ್ನದಲ್ಲಿದ್ದಾರೆ. ರಾಜವಂಶಸ್ಥರಿಗೆ ಅನ್ಯಾಯ ಮಾಡುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಿಲ್ಲಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿಯಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದು, ಮುಂದಿನ ದಿನಗಳಲ್ಲಿ ಅವುಗಳನ್ನೆಲ್ಲ ವರಿಷ್ಠರು ಕ್ರಮೇಣವಾಗಿ ಬಗೆಹರಿಸಲಿದ್ದಾರೆ ಎಂದು ತಿಳಿಸಿದರು.