ಮೈಕ್ರೋ ಫೈನಾನ್ಸ್​ ಕುರಿತು ಅಧಿವೇಶನದಲ್ಲಿ ಚರ್ಚೆ

25 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಮೈಕ್ರೋ ಫೈನಾನ್ಸ್​ ಮೂಲಕ ಸಾಲ ಪಡೆದು ಅನೇಕರು ಸಮಸ್ಯೆಗೆ ಸಿಲುಕುತ್ತಿದ್ದಾರೆ. ಹೀಗಾಗಿ ಈ ವಿಚಾರವಾಗಿ ವಿಧಾನಸಭೆ ಅಧಿವೇಶನದಲ್ಲಿ ವಿಸ್ತೃತವಾಗಿ ಚಚಿರ್ಸಲಾಗುವುದು ಎಂದು ಜೆಡಿಎಸ್​ ಶಾಸಕಾಂಗ ನಾಯಕ ಸುರೇಶ ಬಾಬು ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಮಹಿಳೆಯರಿಗೆ ಹಣ ನೀಡಿ ಪುರುಷರಿಂದ ವಸೂಲಿ ಮಾಡುತ್ತಿದೆ. ಈ ಸರ್ಕಾರದ ಭ್ರಷ್ಟಾಚಾರ ಹಾಗೂ ಹಗರಣಗಳ ಕುರಿತು ಸದನದಲ್ಲಿ ಧ್ವನಿ ಎತ್ತಲಿದ್ದು, ಈ ವಿಚಾರವಾಗಿ ಎಚ್​.ಡಿ. ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕ ಆರ್​. ಅಶೋಕ ಚರ್ಚಿಸಲಿದ್ದಾರೆ ಎಂದರು.

ಭಾಗ್ಯಗಳನ್ನು ಈಡೇರಿಸುವಲ್ಲಿ ಸಂರ್ಪೂಣ ವಿಲವಾಗಿರುವ ಸರ್ಕಾರ, ಆದಾಯ ಹೆಚ್ಚಿಸುವ ಯಾವುದೇ ಪ್ರಯತ್ನಿಸುತ್ತಿಲ್ಲ. ಆದರೆ ಯೋಜನೆಗಳಿಗೆ ಕಡಿವಾಣ ಹಾಕಲು ಚಿಂತಿಸುತ್ತಿದ್ದಾರೆ. ಇಂತಹ ದುರಾಡಳಿತ ನೀಡುವ ಸರ್ಕಾರವನ್ನು ಎಂದಿಗೂ ಕಂಡಿಲ್ಲ ಎಂದರು.

ವೆಂಕಟರಾವ್​ ನಾಡಗೌಡ ಮಾತನಾಡಿ, ಬಿಜೆಪಿ ಮೈತ್ರಿಯೊಂದಿಗೆ ಜಿಪಂ, ತಾಪಂ ಚುನಾವಣೆ ಎದುರಿಸಲಿದ್ದು, ತಯಾರಿ ನಡೆದಿದೆ. ದಿನಾಂಕ ಘೋಷಣೆ ಬಳಿಕವೇ ಸಿಟುಗಳ ಹಂಚಿಕೆ ನಡೆಯಲಿದೆ. ಸ್ಥಳಿಯ ಚುನಾವಣೆಗಳಲ್ಲಿ ಅಧಿಕಾರಕ್ಕೇರುವುದೇ ನಮ್ಮ ಉದ್ದೇಶ ಎಂದರು.

ರಾಜ್ಯ ಸರ್ಕಾರಕ್ಕೆ ಗ್ಯಾರಂಟಿಗಳು ಹೊರೆಯಾಗಿವೆ ಎಂದು ಗೃಹ ಸಚಿವ ಜಿ. ಪರಮೇಶ್ವರ ನೀಡಿರುವ ಹೇಳಿಕೆ ಸತ್ಯ ಹಾಗೂ ವಾಸ್ತವದ ಸಂಗತಿ. ಅಧಿಕಾರಕ್ಕೇರುವ ಹುಮ್ಮಸ್ಸಿನಲ್ಲಿ ಗ್ಯಾರಂಟಿಗಳನ್ನು ಘೋಷಣೆ ಮಾಡಿದ ಕಾಂಗ್ರೆಸ್​, ಈಗ ಅವುಗಳನ್ನು ಜನರಿಗೆ ಸಮರ್ಪಕವಾಗಿ ನೀಡಲು ಸಾಧ್ಯವಾಗುತ್ತಿಲ್ಲ. ಗ್ಯಾರಂಟಿಗಳಿಗೆ ಹಣ ಹೊಂದಿಗೆ ಮಾಡುವಲ್ಲಿ ಹೈರಾಣಾಗಿರುವ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದಂತಾಗಿದೆ ಎಂದು ವ್ಯಂಗ್ಯವಾಡಿದರು.

ಕೇತಗಾನಹಳ್ಳಿ ಭೂ ಒತ್ತುವರಿ ವಿಷಯವಾಗಿ ಕೇಂದ್ರ ಸಚಿವ ಎಚ್​.ಡಿ. ಕುಮಾರಸ್ವಾಮಿ ಮೇಲೆ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಈ ವಿಷಯವಾಗಿ ರಾಜ್ಯ ಸಚಿವರು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ. ನ್ಯಾಯಾಲಯದ ಆದೇಶದದಂತೆ ಅಧಿಕಾರಿಗಳು ಸರ್ವೇ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ನ್ಯಾಯಾಲಯದ ಆದೇಶಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ ಎಂದರು.

ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ, ಗ್ರಾಮಾಂತರ ಅಧ್ಯಕ್ಷ ಬಿ.ಬಿ. ಗಂಗಾಧರಮಠ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಮಂಜುನಾಥ ಹಗೇದಾರ, ಸಿದ್ದು ಒಡೆಯರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net