ವಾಚನಾಯಲಯವಾದ ಚೌಕಾಬಾರ ಆಡುವ ಸ್ಥಳ!

WhatsApp Image 2020-09-17 at 13.56.36 (1)
Published on

ಬೆಂಗಳೂರು: ವಿಶ್ವೇಶ್ವರಯ್ಯ ಟವರ್ಸ್ ಆವರಣದಲ್ಲಿ ಚೌಕಾಬಾರ ಆಡುತ್ತಾ ಕಾಲಾಹರಣ ಮಾಡುತ್ತಿದ್ದ ಸರ್ಕಾರಿ ಕಾರುಗಳ ಚಾಲಕರ ಕೈಗೀಗ ಸರ್ಕಾರದಿಂದಲೇ ದಿನ ಪತ್ರಿಕೆ ತಲುಪಿದೆ, ಈ ಮೂಲಕ ಚೌಕಾಬಾರ ಆಡುವ ಸ್ಥಳ ಕಿರು ವಾಚನಾಲಯವಾಗಿ ಪರಿವರ್ತನೆಯಾಗಿದೆ.

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳು, ನಿರ್ದೇಶನಾಲಯಗಳು, ಅಕಾಡೆಮಿಗಳಿರುವ ನಗರದ ಅಂಬೇಡ್ಕರ್ ವೀದಿಯ ವಿಶ್ವೇಶ್ವರಯ್ಯ ಟವರ್ಸ್ ಆವರಣದಲ್ಲಿ ಮುಖ್ಯದ್ವಾರದ ಸನಿಹದಲ್ಲಿ ನಿತ್ಯವೂ ವಿರಾಮದ ಸಮಯದಲ್ಲಿ ಚೌಕಾಬಾರ ಆಡುತ್ತಾ ಕುಳಿತಿರುತ್ತಿದ್ದ ವಿವಿಧ ಅಧಿಕಾರಿಗಳ ಕಾರು ಚಾಲಕರಿಗೆ ಅನುಕೂಲವಾಗುವಂತೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸೂಚನೆ ಮೇರೆಗೆ ಗ್ರಂಥಾಲಯ ಇಲಾಖೆಯಿಂದ ಪತ್ರಿಕೆಗಳನ್ನು ಒದಗಿಸಲಾಗಿತ್ತು.

ಇತ್ತೀಚಿಗೆ ವಿಶ್ವೇಶ್ವರಯ್ಯ ಟವರ್ಸ್ ನ 4ನೇ ಮಹಡಿಯಲ್ಲಿರುವ ಗ್ರಂಥಾಲಯ ಇಲಾಖೆ ಕಚೇರಿಯಲ್ಲಿನ ಸಭೆಗೆ ಆಗಮಿಸಿದ್ದ ಸಚಿವ ಸುರೇಶ್ ಕುಮಾರ್, ಹತ್ತಾರು ಮಂದಿ ಗುಂಪುಗೂಡಿದ್ದನ್ನು ನೋಡಿ ಕಾರಿನಿಂದ ಇಳಿದು ಸ್ಥಳಕ್ಕೆ ಭೇಟಿ ನೀಡಿದರು. ಆಗ ಕಾರು ಚಾಲಕರೆಲ್ಲ ಚೌಕಾಬಾರ ಆಡುವುದರಲ್ಲಿ ತೊಡಗಿದ್ದರು. ಅವರನ್ನೆಲ್ಲ ಮಾತನಾಡಿಸಿದ ಸಚಿವರು ಗ್ರಂಥಾಲಯ ಇಲಾಖೆ ನಿರ್ದೇಶಕರನ್ನು ಕರೆದು, ಚಾಲಕರಿಗೆ ವಿರಾಮ ದೊರೆತಾಗ ಓದಲು ಅನುಕೂಲವಾಗುವಂತೆ ಈ ಸ್ಥಳಕ್ಕೆ ಪತ್ರಿಕೆಗಳನ್ನು ಪೂರೈಸಲು ಸೂಚಿಸಿದರು.

ಸಚಿವರ ನಿರ್ದೇಶನದಂತೆ ಗ್ರಂಥಾಲಯ ಇಲಾಖೆಯಿಂದ ಚಾಲಕರು ಚೌಕಾಬಾರ ಆಡುತ್ತಿದ್ದ ಸ್ಥಳಕ್ಕೆ ಪತ್ರಿಕೆಗಳನ್ನು ಪೂರೈಸಿದ್ದು, ಚಾಲಕರೆಲ್ಲ ಚೌಕಾಬಾರ ಆಟದ ಬದಲಿಗೆ ಪತ್ರಿಕೆ ಓದುವುದರಲ್ಲಿ ಮಗ್ನರಾಗಿದ್ದಾರೆ. ತಮಗೆಲ್ಲ ಪತ್ರಿಕೆ ಒದಗಿಸಲು ಸೂಚಿಸಿರುವುದಕ್ಕೆ ಚಾಲಕರು ಸಚಿವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈಗ ಚೌಕಾಬಾರ ಆಡುವ ಸ್ಥಳ ವಾಚಾನಾಲಯವಾಗಿ ಮಾರ್ಪಟ್ಟಿದೆ ಎಂದು ಚಾಲಕರು ಖುಷಿ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net