

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಕೃಷಿ ಭಾಗ್ಯ ಯೋಜನೆಯಡಿ ನೀರು ಸಂಗ್ರಹಕ್ಕೆ ಕೃಷಿ ಹೊಂಡ ನಿರ್ಮಾಣಕ್ಕೆ ಒತ್ತು ನೀಡಿರುವ ಕೃಷಿ ಇಲಾಖೆ ನೀರಿನ ನೀರಿನ ಮಿತಿ ಬಳಕೆಯಿಂದ ಅಧಿಕ ಇಳುವರಿ ಪಡೆಯಲು ಹಾಗೂ ಜಿಲ್ಲೆಯಲ್ಲಿ ಲಘು ನೀರಾವರಿ ಪದ್ಧತಿಯನ್ನು ಜನಪ್ರಿಯಗೊಳಿಸಲು ಸೂಕ್ಷ್ಮ ನೀರಾವರಿ ಘಟಕಗಳ ಅಳವಡಿಕೆಗೆ ಒತ್ತು ನೀಡಿದೆ.
ರಾಜ್ಯಾದ್ಯಂತ ಕೃಷಿ ಚಟುವಟಿಕೆಗಳಿಗೆ ಸಹಾಯವಾಗುವಂತೆ ಸೂಕ್ಷ್ಮ ನೀರಾವರಿ (ಹನಿ ನೀರಾವರಿ ಮತ್ತು ತುಂತುರು ನೀರಾವರಿ) ಘಟಕಗಳನ್ನು ಅಳವಡಿಸಿಕೊಳ್ಳಲು ಎಲ್ಲ ವರ್ಗದ ರೈತರಿಗೆ ಕೃಷಿ ಇಲಾಖೆಯಿಂದ ಶೇ.90ರ ರಿಯಾಯಿತಿಯಲ್ಲಿ ಸೌಲಭ್ಯ ಒದಗಿಸಲಾಗುತ್ತಿದ್ದು ಇದೇ ಮಾದರಿಯಲ್ಲಿ ಗ್ರಾಮಾಂತರ ಜಿಲ್ಲೆಯಲ್ಲೂ ಯೋಜನೆ ಅನುಷ್ಟಾನಗೊಳ್ಳುತ್ತಿದ್ದು ಕೃಷಿ ಇಲಾಖೆ ಸಹಾಯಧನಕ್ಕಾಗಿ ರೈತರಿಂದ ಅರ್ಜಿ ಆಹ್ವಾನಿಸಿದೆ. ಬಯಲು ಸೀಮೆಯಾಗಿರುವ ಗ್ರಾಮಾಂತರ ಜಿಲ್ಲೆಯಲ್ಲಿ ಯಾವುದೇ ನದಿಮೂಲದವಿಲ್ಲದ ಕಾರಣ ಮಳೆಯಾಶ್ರಿತ ಹಾಗೂ ಕೊಳವೆಬಾವಿ ಅವಲಂಬಿತ ಕೃಷಿ ಚಟುವಟಿಕೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನೀರಿನ ಮಿತಿ ಬಳಕೆಗೆ ಆದ್ಯತೆ ನೀಡಲು ಈ ಯೋಜನೆ ಸಹಕಾರಿಯಾಗಲಿದೆ ಎಂದು ಕೃಷಿ ಇಲಾಖೆ ಉಪನಿರ್ದೇಶಕಿ ಗಾಯತ್ರಿ ತಿಳಿಸಿದ್ದಾರೆ.
ಸೌಲಭ್ಯ ಪಡೆಯಲು ನಿಯಮಗಳೇನು? ಹನಿ ಮತ್ತು ತುಂತುರು ನೀರಾವರಿ ಘಟಕಗಳ ಅಳವಡಿಕೆಗೆ ಎಲ್ಲ ವರ್ಗದ ರೈತರಿಗೆ 5.0 ಹೆಕ್ಟೇರ್ ಪ್ರದೇಶದವರೆಗೆ ಸಹಾಯಧನ ನೀಡಲಾಗುತ್ತದೆ. ಮೊದಲ ಎರಡು ಹೆಕ್ಟೇರ್‌ಪ್ರದೇಶದವರೆಗೆ ಶೇ.90 ಸಹಾಯಧನ ಮತ್ತು ಎರಡು ಹೆಕ್ಟೇರ್‌ಗಿಂತ ಮೇಲ್ಪಟ್ಟು 5.0 ಹೆಕ್ಟೇರ್ ವರೆಗೆ ಶೇ.45 ಸಹಾಯಧನವನ್ನು ಸಾಮಾನ್ಯ ವರ್ಗದ ರೈತರಿಗೆ ಮತ್ತು ಶೇ.55 ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ರೈತರಿಗೆ ನೀಡಲು ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸರ್ಕಾರದಿಂದ ಅನುಮೋದನೆಗೊಂಡಿರುವ ಸಂಸ್ಥೆಗಳಿಂದ ಘಟಕಗಳನ್ನು ಅಳವಡಿಸಿಕೊಂಡಲ್ಲಿ ಮಾತ್ರ ಸಹಾಯಧನ ದೊರೆಯುತ್ತದೆ.ಸೂಕ್ಷ್ಮ ನೀರಾವರಿ ಘಟಕವನ್ನು ಸಹಾಯಧನದಡಿ ಪಡೆಯಲು ಸಾಮಾನ್ಯ ವರ್ಗದ ರೈತರಿಗೆ ಒಮ್ಮೆ ಮಾತ್ರ ಹಾಗೂ ಪರಿಶಿಷ್ಟ ಜಾತಿ ರೈತರಿಗೆ ಏಳು ವರ್ಷಗಳಿಗೊಮ್ಮೆ ಮಾತ್ರ ಅವಕಾಶವಿರುತ್ತದೆ. ಏಳು ವರ್ಷಗಳ ಹಿಂದೆ, ಸೂಕ್ಷ್ಮನೀರಾವರಿ ಸವಲತ್ತು ಪಡೆದ ಪರಿಶಿಷ್ಟ ಜಾತಿ ರೈತರಿಗೆ ಮತ್ತೊಮ್ಮೆ ಸವಲತ್ತು ಪಡೆಯಲು ರೈತರಿಗೆ ಆದ್ಯತೆ ಮೇಲೆ ನೀಡಲಾಗುವುದು ಎಂದು ಕೃಷಿ ಇಲಾಖೆ ತಿಳಿಸಿದೆ.
ಏನೇನು ಬೇಕು: ರೈತರು ಸಹಾಯಧನದಡಿ ಸವಲತ್ತು ಪಡೆಯಲು ನಿಗದಿತ ನಮೂನೆಯಲ್ಲಿ ಸಂಬಂಧಿಸಿದ ದಾಖಲೆಗಳೊಂದಿಗೆ-ಪಹಣಿ, ಹಿಡುವಳಿ ಪತ್ರ, ಪರಿಶಿಷ್ಟ ಜಾತಿ, ಪಂಗಡ ರೈತರಿಗೆ ಜಾತಿ ಪ್ರಮಾಣ ಪತ್ರ, ಮೊಬೈಲ್ ಸಂಖ್ಯೆ, ಚೆಕ್ಕುಬಂದಿ, ನೀರಿನ ಲಭ್ಯತೆ ಪ್ರಮಾಣ ಪತ್ರ, ಆಧಾರ ಕಾರ್ಡ್ ಪ್ರತಿ, ಮತದಾರರ ಗುರುತಿನ ಚೀಟಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯಿಂದ ಸಹಾಯಧನ ಪಡೆದಿರುವುದಿಲ್ಲ ಎಂಬ ಪ್ರಮಾಣ ಪತ್ರ, ಬ್ಯಾಂಕ್ ಖಾತೆ ಸಂಖ್ಯೆ, 100 ರೂ ಛಾಪಾ ಕಾಗದದ ಮೇಲೆ ಮುಚ್ಚಳಿಕೆ ಪತ್ರದೊಂದಿಗೆ ರೈತ ಸಂಪರ್ಕ ಕೇಂದ್ರದ ಮುಖ್ಯಸ್ಥರಿಗೆ ಸಲ್ಲಿಸಬೇಕು.
ಕೃಷಿ ಹೊಂಡದ ಯೋಜನೆಯಂತೆ ಈ ಯೋಜನೆಯೂ ರೈತಾಪಿ ವರ್ಗಕ್ಕೆ ಬಹಳ ಸಹಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಕೆಲವೊಂದು ನಿಯಮಗಳನ್ನು ಅನುಸರಿಸಬೇಕಿದೆ. ಸೂಕ್ಷ್ಮ ನೀರಾವರಿ ಘಟಕಗಳನ್ನು ಕೃಷಿಗೆ ಮಾತ್ರ ಉಪಯೋಗಿಸಲಾಗುವುದು ಎಂದು ರೈತರು ಘೋಷಣಾ ಪತ್ರ ನೀಡಬೇಕು. ರೈತರು ಕಡ್ಡಾಯವಾಗಿ ಎ್ಐಡಿ ಹೊಂದಿರಬೇಕು. ಇಲಾಖೆಯಿಂದ ಸೂಕ್ಷ್ಮ ನೀರಾವರಿ ಘಟಕಗಳನ್ನು ಪಡೆಯಲು ಹೆಚ್ಚಿನ ವಿವರಗಳಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬಹುದು.
ಗಾಯತ್ರಿ, ಉಪನಿರ್ದೇಶಕಿ ಕೃಷಿ ಇಲಾಖೆ ಬೆಂ.ಗ್ರಾಮಾಂತರ