

ಮಂಡ್ಯ: ಮಹಿಳೆಯರ ಸಬಲೀಕರಣವೇ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಉದ್ದೇಶ. ಸಾಲ ಪಡೆದು ಬದುಕನ್ನು ರೂಪಿಸಿಕೊಳ್ಳುವುದು ಎಲ್ಲರ ಕರ್ತವ್ಯವಾಗಬೇಕು ಎಂದು ಬಿಎಸ್‌ಎಸ್ ಮೈಕ್ರೋ ಫೈನಾನ್ಸ್ ಕರ್ನಾಟಕ ದಕ್ಷಿಣ ವಿಭಾಗದ ಮುಖ್ಯಸ್ಥ ಜಗದೀಶ್ ತಿಳಿಸಿದರು.
ನಗರದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಕಿರುಹಣಕಾಸು ಸಂಸ್ಥೆಗಳ ಒಕ್ಕೂಟದಿಂದ ಆಯೋಜಿಸಿದ್ದ ಹಣಕಾಸು ನಿರ್ವಹಣೆಯ ತಿಳಿವಳಿಕೆ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸಣ್ಣ ಹಣಕಾಸು ಸಂಸ್ಥೆಗಳು ಯಾವುದೇ ಸಾಲ ನೀಡುವಾಗಲೂ ಮನೆ, ಆಸ್ತಿ ಪತ್ರ ಇದ್ಯಾದಿ ಯಾವುದೇ ದಾಖಲಾತಿಗಳನ್ನು ಕೇಳುವುದಿಲ್ಲ. ಬದಲಿಗೆ ಕೇವಲ ಆಧಾರ್‌ಕಾರ್ಡ್ ಮಾತ್ರ ತೆಗೆದುಕೊಂಡು ಮನೆ ಬಳಿಗೆ ಬಂದು ಸಾಲ ನೀಡುತ್ತವೆ ಎಂದರು.
ಕಿರು ಹಣಕಾಸು ಸಂಸ್ಥೆಗಳು ಕೇವಲ ಸಾಲ ನೀಡುವುದಷ್ಟೇ ಅಲ್ಲ. ಸಾಮಾಜಿಕ ಸೇವಾ ಕಾರ್ಯಗಳಲ್ಲೂ ತೊಡಗಿಸಿಕೊಂಡಿವೆ. ಕರೊನಾ ಸಂದರ್ಭದಲ್ಲಿ ಸ್ಯಾನಿಟೈಸರ್, ಆಹಾರ ಕಿಟ್‌ಗಳನ್ನು ವಿತರಿಸಲಾಗಿದೆ. ಮಕ್ಕಳಿಗೆ ಪುಸ್ತಕ, ಬ್ಯಾಗ್, ಕಂಪ್ಯೂಟರ್ ತರಬೇತಿ ನೀಡಲಾಗುತ್ತದೆ. ಟೈಲರಿಂಗ್ ತರಬೇತಿ, ಆರೋಗ್ಯ ಶಿಬಿರಗಳು, ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿವೆ ಎಂದು ವಿವರಿಸಿದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಎಂ.ಪಿ.ದೀಪಕ್, ವಿಬ್‌ಸಿಟಿ ನಿರ್ದೇಶಕ ವಿವೇಕ್, ಒಕ್ಕೂಟದ ಸಿಇಒ ವಿ.ಎನ್.ಹೆಗಡೆ, ಆರ್.ವಿ. ಕುಲಕರ್ಣಿ, ಬಿಎಸ್‌ಎಸ್ ಪ್ರಸನ್ನ ಇತರರಿದ್ದರು.