

ರಾಣೆಬೆನ್ನೂರ: ಕರೊನಾ ಲಾಕ್ಡೌನ್ ಸಮಯದಲ್ಲಿ ಮೈಕ್ರೋ ಫೈನಾನ್ಸ್ನವರು ಸಾಲ ಮರುಪಾವತಿಗೆ ಒತ್ತಾಯಿಸಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾರೆ. ಕೂಡಲೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ತಾಲೂಕು ಸ್ತ್ರೀ ಶಕ್ತಿ ಹಾಗೂ ಸ್ವ-ಸಹಾಯ ಸಂಘಗಳ ಹಿತರಕ್ಷಣಾ ಸಮಿತಿ ವತಿಯಿಂದ ತಹಸೀಲ್ದಾರ್ ಶಂಕರ ಜಿ.ಎಸ್. ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಮಿತಿಯ ಅಧ್ಯಕ್ಷ ರವೀಂದ್ರಗೌಡ ಪಾಟೀಲ ಮಾತನಾಡಿ, ಕರೊನಾ ಸಂಕಷ್ಟದ ಕಾಲದಲ್ಲಿ ಮೈಕ್ರೋ ಫೈನಾನ್ಸ್ನವರು ಶಹರ ಹಾಗೂ ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ತೆರಳಿ ಸಾಲ ಮರುಪಾವತಿ ಮಾಡುವಂತೆ ಮಹಿಳೆಯರಿಗೆ ಒತ್ತಾಯಿಸುತ್ತಿದ್ದಾರೆ. ಆದರೆ, ಕರೊನಾ ಲಾಕ್ಡೌನ್ನಿಂದ ಜನತೆಗೆ ದುಡಿಮೆಯಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಸಮಯದಲ್ಲಿ ನಿತ್ಯದ ತುತ್ತಿನ ಚೀಲ ತುಂಬಿಸಿಕೊಳ್ಳುವುದೇ ಸವಾಲಿನ ಕೆಲಸವಾಗಿದೆ. ಇಂಥ ಸಮಯದಲ್ಲಿ ಸಾಲದ ಕಂತು ತುಂಬಲು ಬಡವರಿಗೆ ಹೇಗೆ ಸಾಧ್ಯ? ಆದ್ದರಿಂದ ರಾಜ್ಯ ಸರ್ಕಾರ ಕೂಡಲೆ ಸೂಕ್ತ ಕ್ರಮ ಕೈಗೊಂಡು ಆಗಸ್ಟ್ 30ರವರೆಗೆ ಯಾವುದೇ ಸಾಲದ ಕಂತು ಪಡೆದುಕೊಳ್ಳದಂತೆ ಮೈಕ್ರೋ ಫೈನಾನ್ಸ್ನವರಿಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಚಂದ್ರಣ್ಣ ಬೇಡರ, ಮೆಬೂಬಿ ಸೌಧಗಾರ, ಮೈತ್ರಾ ಹದಡಿ, ಲಕ್ಷ್ಮೀ ಮೇದರ, ಲತಾ ಕೋಗಳೆ, ಹನುಮಂತಪ್ಪ ಕಬ್ಬಾರ, ಕೇಶವ ಹದಡಿ, ಬಸವರಾಜ ಬಣಕಾರ, ಗೋವಿಂದರೆಡ್ಡಿ ಚಳಗೇರಿ, ಮಂಜುನಾಥ ದುಗ್ಗತ್ತಿ ಮತ್ತಿತರರಿದ್ದರು.