

ಗೌರಿಬಿದನೂರು: ಮೈಕ್ರೋ ಫೈನಾನ್ಸ್ ಕಿರುಕುಳದಿಂದಾಗಿ 15 ದಿನಗಳ ಹಿಂದಷ್ಟೇ ತಾಲೂಕಿನ ಎಚ್.ನಾಗಸಂದ್ರದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಮಾಸುವ ಮುನ್ನವೇ ತಾಲೂಕಿನಲ್ಲಿ ಮತ್ತೊಬ್ಬ ಭಾನುವಾರ ನೇಣು ಬಿಗಿದುಕೊಂಡಿದ್ದಾನೆ.
ತಾಲೂಕಿನ ಕಾದಲವೇಣಿ ಗ್ರಾಪಂನ ಮರಳೂರು ಎಂ.ಜಾಲಹಳ್ಳಿಯ ಮಂಜುನಾಥ್(34) ಆತ್ಮಹತ್ಯೆ ಮಾಡಿಕೊಂಡವ.
ಮಂಜುನಾಥ್ ತಳ್ಳುವ ಗಾಡಿಯಲ್ಲಿ ಎಗ್‌ರೈಸ್ ಮತ್ತು ಕಬಾಬ್ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದ. ಜೀವನ ನಿರ್ವಹಣೆಗೆಂದು ಕೆಲ ಖಾಸಗಿ ಫೈನಾನ್ಸ್ಗಳಲ್ಲಿ ಸುಮಾರು 6.25 ಲಕ್ಷ ರೂ. ಸಾಲ ಮಾಡಿದ್ದ. ಸಾಕಷ್ಟು ಕಂತುಗಳನ್ನು ಪಾವತಿಸಿದ್ದರೂ ಮಾ.9ರಂದು ಒಂದು ಫೈನಾನ್ಸ್ಗೆ ಹಣ ಕಟ್ಟಲು ಸಾಧ್ಯವಾಗಿರಲಿಲ್ಲ. ಇದರಿಂದ ಸಂಸ್ಥೆಯವರು ನಿತ್ಯ ಮನೆ ಬಳಿ ಬಂದು ಹಣ ಕಟ್ಟುವಂತೆ ಪೀಡಿಸುತ್ತಿದ್ದರು. ಬೇರೆಡೆ ಸಾಲ ತರುವುದಾಗಿ ಪತ್ನಿ ಸವಿತಾಗೆ ತಿಳಿಸಿ ಭಾನುವಾರ ಮಧ್ಯಾಹ್ನ 2 ಗಂಟೆಗೆ ಮನೆಯಿಂದ ಹೊರ ಹೋದ ಮಂಜುನಾಥ್ ಮನೆಗೆ ಮರಳಿರಲಿಲ್ಲ.
ಈ ಮಧ್ಯೆ ಇಡಗೂರು ಮತ್ತು ಗೌರಿಬಿದನೂರು ರಸ್ತೆಯಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದ ಮುಂಭಾಗದ ಬಯಲು ಪ್ರದೇಶದಲ್ಲಿನ ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಗಮನಿಸಿದ ಕುರಿಗಾಹಿಗಳು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪತ್ನಿ ನೀಡಿದ ದೂರಿನ ಮೇರೆಗೆ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುಟುಂಬಸ್ಥರಿಂದ ಪ್ರತಿಭಟನೆ
ಕುಟುಂಬದ ಸದಸ್ಯರು ಸೋಮವಾರ ಬೆಳಗ್ಗೆ ಖಾಸಗಿ ೈನಾನ್ಸ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಆದರೆ, ಕಂಪನಿ ಅಧಿಕಾರಿಗಳು ಯಾರೊಬ್ಬರೂ ಕಚೇರಿ ಬಾಗಿಲು ತೆರೆಯದೆ ನಾಪತ್ತೆಯಾಗಿದ್ದರು. ಪೋನ್ ಕರೆಗಳನ್ನೂ ಸ್ವೀಕರಿಸಲಿಲ್ಲ. ವೃತ್ತ ನಿರೀಕ್ಷಕ ಕೆ.ಪಿ.ಸತ್ಯನಾರಾಯಣ್, ಪಿಎಸ್‌ಐ ಗೋಪಾಲ್, ರಮೇಶ್ ಗುಗ್ಗರಿ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾಕಾರರ ಮನವೊಲಿಸಿದರು. ಈ ವೇಳೆ ವೃತ್ತ ನಿರೀಕ್ಷಕ ಸತ್ಯನಾರಾಯಣ್ ಮಾತನಾಡಿ, ಮೈಕ್ರೋ ೈನಾನ್ಸ್‌ನವರು ಕಿರುಕುಳ ನೀಡಿರುವುದನ್ನು ಉಲ್ಲೇಖಿಸಿ ದೂರು ನೀಡಿದಲ್ಲಿ ಕ್ರಮವಹಿಸಲಾಗುವುದು. ಇನ್ನು ಸಾರ್ವಜನಿಕರು ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾಧ್ಯವಾದಷ್ಟು ದೂರವಿರಬೇಕು ಎಂದರು. ಪೊಲೀಸರು ನೀಡಿದ ಭರವಸೆ ಮೇರೆಗೆ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.