

ಕೋಲಾರ: ದೇಶದಲ್ಲೇ ಮೊದಲ ಬಾರಿಗೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಬ್ಯಾಂಕ್‌ನಿಂದ ಪಾರದರ್ಶಕವಾಗಿ ಲೆಕ್ಕ ನಿರ್ವಹಣೆ ಹಾಗೂ ಗ್ರಾಹಕರ ಅನುಕೂಲಕ್ಕಾಗಿ ಮೈಕ್ರೋ ಎಟಿಎಂ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಇದರ ಕಾರ್ಯಾಚರಣೆಗಾಗಿ ಆವಿಷ್ಕಾರಗೊಳಿಸಿರುವ ಸಾಫ್ಟ್‌ವೇರ್ ಫಲಪ್ರದವಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸಂತಸ ವ್ಯಕ್ತಪಡಿಸಿದ್ದಾರೆ.
ಡಿಸಿಸಿ ಬ್ಯಾಂಕ್ ಕಳೆದ 6 ವರ್ಷಗಳಲ್ಲಿ ನೂರಾರು ಕೋಟಿ ರೂ. ಸಾಲವನ್ನು ರೈತರು, ಸ್ತ್ರೀಶಕ್ತಿ ಸಂಘಗಳು ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ನೀಡಿದ್ದು, ಗ್ರಾಹಕರಲ್ಲಿ ಬ್ಯಾಂಕಿನ ಬಗ್ಗೆ ನಂಬಿಕೆ, ವಿಶ್ವಾಸದ ಜತೆಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪ್ಯಾಕ್ಸ್)ಗಳಲ್ಲಿ ಪಾರದರ್ಶಕ ಆಡಳಿತಕ್ಕಾಗಿ ಮೈಕ್ರೋ ಎಟಿಎಂ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಎರಡೂ ಜಿಲ್ಲೆಯ 200 ಸಂಘಗಳಿಗೆ ಮೈಕ್ರೋ ಎಟಿಎಂ ಒದಗಿಸಲಾಗಿದೆ. ನಬಾರ್ಡ್‌ನಿಂದ ಶೇ.90 ಹಾಗೂ ಡಿಸಿಸಿ ಬ್ಯಾಂಕಿನಿಂದ ಶೇ.10 ಆರ್ಥಿಕ ನೆರವು ಕಲ್ಪಿಸಲಾಗಿದೆ. ಪ್ರತಿ ಮೈಕ್ರೋ ಎಟಿಎಂಗೆ 21,500 ರೂ. ವೆಚ್ಚ ಭರಿಸಲಾಗಿದೆ. ಇನ್ನು ಮುಂದೆ ರೈತರು, ಮಹಿಳೆಯರು ವ್ಯವಹಾರಕ್ಕಾಗಿ ಬ್ಯಾಂಕಿಗೆ ಬರದೆ ಮನೆ ಬಾಗಿಲಲ್ಲೇ ಸೇವೆ ಪಡೆಯಬಹುದಾಗಿದೆ ಎಂದರು.
ಮಾಲೂರು ತಾಲೂಕಿನ ತೊರ‌್ನಹಳ್ಳಿಯಲ್ಲಿ 3 ದಿನಗಳ ಹಿಂದೆ ಸಾಂಕೇತಿಕವಾಗಿ ಎಟಿಎಂ ಲೋಕಾರ್ಪಣೆ ಮಾಡಲಾಗಿತ್ತು. ಶನಿವಾರ ಕೋಲಾರ ಕಚೇರಿಯಲ್ಲಿ ಎಟಿಎಂಗೆ ಸಂಬಂಧಿಸಿದ ಸಾಫ್ಟ್‌ವೇರ್ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದು, ಗ್ರಾಹಕರಿಗೆ ನೀಡಿರುವ ಸಾಲ, ಸಾಲದ ಕಂತು ಮರುಪಾವತಿ, ರಸೀದಿಗಳ ವಿವರ ಸೇರಿ ಎಲ್ಲ ಡೇಟಾಗಳನ್ನು ಸಾಕ್ಷೀಕರಿಸಲಾಯಿತು. ಮೈಕ್ರೋ ಎಟಿಎಂ ವ್ಯವಸ್ಥೆ ಜಾರಿ ನನ್ನ ಬಹುದಿನಗಳ ಕನಸಾಗಿತ್ತು. ಈಗ ಈಡೇರಿದೆ, ನಮ್ಮ ವಿರುದ್ಧ ಇನ್ನು ಮುಂದೆ ಯಾವುದೇ ರೀತಿಯ ಟೀಕೆಗಳಿಗೆ ಅವಕಾಶವಿರುವುದಿಲ್ಲ, ಗ್ರಾಹಕರು ಎಟಿಎಂ ಕಾರ್ಡ್‌ಗಳನ್ನು ಪಡೆದು ಹಣಕಾಸಿನ ವ್ಯವಹಾರವನ್ನು ಸುಲಲಿತವಾಗಿ ನಡೆಸಬಹುದು ಎಂದರು.
ಪ್ಯಾಕ್ಸ್‌ಗಳಲ್ಲಿ ಬಳಕೆಯಾಗುವ ಮೈಕ್ರೋ ಎಟಿಎಂಗಳಿಗೆ ಸಂಬಂಧಿಸಿದಂತೆ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಎರಡೂ ಜಿಲ್ಲೆಯಲ್ಲಿ ಸುಮಾರು 40 ಸಾವಿರ ಎಟಿಎಂ ಕಾರ್ಡ್‌ಗಳನ್ನು ವಿತರಣೆ ಮಾಡಲಾಗಿದೆ. ಬೇಡಿಕೆ ಹೆಚ್ಚಾದಲ್ಲಿ ಇನ್ನಷ್ಟು ಗ್ರಾಹಕರಿಗೆ ಕಾರ್ಡ್ ವಿತರಣೆ ಮಾಡಲಾಗುವುದು. ಬ್ಯಾಲಹಳ್ಳಿ ಗೋವಿಂದಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ