ಮಂಗಳೂರು: ರಾಜ್ಯದ ಎರಡನೇ ಅತ್ಯಂತ ಜನ ನಿಬಿಡ ವಿಮಾನ ನಿಲ್ದಾಣವೆಂದು ಗುರುತಿಸಲಾಗಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪ್ರಸಕ್ತ ವರ್ಷ(2023)ದ ಮೊದಲ ಎರಡು ತಿಂಗಳಲ್ಲಿ(ಜನವರಿ ಮತ್ತು ಫೆಬ್ರವರಿ)ಒಟ್ಟು 2,92,817 ಮಂದಿ ಪ್ರಯಾಣಿಸಿದ್ದಾರೆ.
ಇದರಲ್ಲಿ 2,00,527 ಮಂದಿ ದೇಶೀಯ ಹಾಗೂ 92,290 ಮಂದಿ ಅಂತಾರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ.
ಈ ಹಿಂದಿನ ಕ್ಯಾಲೆಂಡರ್ ವರ್ಷದ(2022) ಪ್ರಥಮ ಎರಡು ತಿಂಗಳು ಮಂಗಳೂರು ವಿಮಾನ ನಿಲ್ದಾಣ ಮೂಲಕ 1,38,510 ಮಂದಿ ದೇಶಿಯ ಹಾಗೂ 56,506 ಮಂದಿ ಅಂತಾರಾಷ್ಟ್ರೀಯ ಪ್ರಯಾಣಿಕರು ಸಂಚರಿದ್ದರು. ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಮೊದಲ ಎರಡು ತಿಂಗಳಲ್ಲಿ 97,801 ಮಂದಿ ಅಧಿಕ ಪ್ರಯಾಣಿಸಿದ್ದಾರೆ.
ಅದಾನಿ ಗ್ರೂಪ್ ನಿರ್ವಹಿಸುತ್ತಿರುವ ದೇಶದ ಏಳು ವಿಮಾನ ನಿಲ್ದಾಣಗಳು ದೇಶೀಯವಾಗಿ 92ಶೇ. ಮತ್ತು ಅಂತರಾಷ್ಟ್ರೀಯ ಪ್ರಯಾಣಿಕರಲ್ಲಿ 133 ಶೇ. ರಷ್ಟು ಏರಿಕೆ ಕಂಡಿವೆ. ದೇಶೀಯ ವಿಮಾನಗಳ ಸಂಖ್ಯೆಯಲ್ಲಿ 58ಶೇ. ಮತ್ತು ಅಂತರರಾಷ್ಟ್ರೀಯ ವಿಮಾನಗಳ ಸಂಖ್ಯೆಯಲ್ಲಿ 61ಶೇ. ರಷ್ಟು ಏರಿಕೆಯಾಗಿದೆ. ಇದು ವಿಮಾನ ಸೇವೆ ಕೋವಿಡ್ ಪೂರ್ವ ಸ್ಥಿತಿಗೆ ಮರಳಿರುವ ಸೂಚನೆಯಾಗಿದೆ.