

ಉಡುಪಿ: ಪ್ರತಿಯೊಬ್ಬರು ಈ ದೇಶದ ಕಾನೂನುಗಳನ್ನು ಅರಿತು ಪರಿಪಾಲನೆ ಮಾಡಬೇಕು. ತಪ್ಪು ಮಾಡಿದಾಗ ಕಾನೂನಿನ ಜ್ಞಾನವಿಲ್ಲವೆಂದು ಹೇಳಿ ಯಾವುದೇ ಪ್ರಕರಣಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಹೇಳಿದರು.
ನಗರದ ಎಂ.ಜಿ.ಎಂ. ಕಾಲೇಜಿನ ರವೀಂದ್ರ ಮಂಟಪದಲ್ಲಿ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ (ರಿ), ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ವೈಕುಂಠ ಬಾಳಿಗಾ ಕಾನೂನು ಕಾಲೇಜು ಹಾಗೂ ಎಂ.ಜಿ.ಎಂ ಪಿಯು ಕಾಲೇಜು ಉಡುಪಿ ಇವರ ಸಹಯೋಗದೊಂದಿಗೆ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ಮನುಷ್ಯನ ಹುಟ್ಟಿನಿಂದ ಕೊನೆಯವರೆಗಿನ ಜೀವನದ ಹಂತಗಳಲ್ಲಿ ಅನೇಕ ಕಾನೂನುಗಳು ರಕ್ಷಣೆಗೆ ಇರುತ್ತವೆ. ಇವುಗಳನ್ನು ಪ್ರತಿಯೊಬ್ಬರೂ ಅರಿತು ಪಾಲಿಸಬೇಕು. ಕಾನೂನುಗಳನ್ನು ಉಲ್ಲಂಘಿಸಿ, ಇವುಗಳ ಜ್ಞಾನ ಇಲ್ಲವೆಂದು ಹೇಳಿ, ಕಾನೂನಿನ ಚೌಕಟ್ಟಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಶರ್ಮಿಳಾ ಎಸ್ ಮಾತನಾಡಿ, ಕಾನೂನು ಪ್ರತಿಯೊಬ್ಬ ಮನುಷ್ಯನ ಜೀವನದ ಅವಿಭಾಜ್ಯ ಅಂಗ. ಪ್ರತೀ ವ್ಯಕ್ತಿಯೂ ಹುಟ್ಟಿನಿಂದ ಸಾಯುವವರೆಗೂ ತನಗೆ ಅರಿವಿಲ್ಲದಂತೆಯೇ ಪ್ರತಿದಿನ ಕಾನೂನಿನ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾನೆ. ಯುವಜನತೆ ವಿದ್ಯಾರ್ಥಿ ಜೀವನದಿಂದಲೇ ಕಾನೂನು ಕುರಿತು ಅರಿವು ಹೊಂದಿದಾಗ ಇನ್ನಷ್ಟು ಜನರಿಗೆ ತಲುಪಲು ಸಾಧ್ಯ ಎಂದರು.
ಕಾನೂನಿನ ಅಡಿಯಲ್ಲಿ ಮಹಿಳೆಯರು, ಮಕ್ಕಳು, ಪ್ರಾಕೃತಿಕ ವಿಕೋಪಕ್ಕೆ ಒಳಗಾದವರು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ, ವಾರ್ಷಿಕ ಆದಾಯ ಮೂರು ಲಕ್ಷಕ್ಕಿಂತ ಕಡಿಮೆ ಇರುವ ಎಲ್ಲಾ ಜಾತಿ ಮತ್ತು ವರ್ಗದವರಿಗೆ ಹಾಗೂ ಮಾನಸಿಕ ಅಸ್ವಸ್ಥರಿಗೆ ಉಚಿತ ಕಾನೂನು ನೆರವನ್ನು ನೀಡಲಾಗುತ್ತಿದ್ದು, ಸಾರ್ವಜನಿಕರು ಹಾಗೂ ಮಕ್ಕಳಿಗಿರುವ ಹಕ್ಕುಗಳು ಸರಿಯಾಗಿ ಅನುಷ್ಠಾನವಾಗಬೇಕು ಎಂದರು.
ಎಂ.ಜಿ.ಎಂ ಪಿಯು ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ರೋಹಿತ್ ಎಸ್ ಆಮೀನ್ ಹಾಗೂ ಡಾ. ನವೀನ್ ಚಂದ್ರ ಸಿ.ಬಿ ಕಾನೂನುಗಳ ಕಾಯ್ದೆಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ರೆನಾಲ್ಡ್ ಪ್ರವೀಣ್ ಕುಮಾರ್, ಎಂ.ಜಿ.ಎA ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮಿ ನಾರಾಯಣ ಕಾರಂತ ಉಪಸ್ಥಿತರಿದ್ದರು.