

ಉಡುಪಿ: ಬಾಲ್ಯದಲ್ಲಿ ಮೈಗೂಡಿಸಿಕೊಂಡ ಸದ್ಗುಣಗಳು ಮುಂದೆ ಲೋಕಹಿತಕ್ಕೆ ಕಾರಣವಾಗುತ್ತವೆ. ಗಾಂಧೀಜಿಯ ಹಾಗೂ ಶಾಸ್ತ್ರೀಜಿಯ ಆದರ್ಶಮಯ ಬದುಕನ್ನು ಕಂಡಾಗ ಮನದಟ್ಟಾಗುತ್ತದೆ. ಇವರಿಬ್ಬರ ಜೀವನವೂ ತೆರೆದಪುಸ್ತಕದಂತೆ ಆದರ್ಶಪ್ರಾಯವಾಗಿದೆ. ಎಲ್ಲರಲ್ಲಿಯೂ ಇರುವ ಒಳ್ಳೆಯ ಗುಣಗಳನ್ನು ಗ್ರಹಿಸಿಕೊಂಡು ಅನುಸರಿಸಿದರೆ ಮಾತ್ರ ವ್ಯಕ್ತಿತ್ವ ವಿಕಸನ ಹೊಂದುತ್ತದೆ ಎಂದು ಪಡುಬಿದ್ರಿ ಗಣಪತಿ ಹೈಸ್ಕೂಲ್ ಸಂಸತ ಅಧ್ಯಾಪಕ ಡಾ. ರಾಘವೇಂದ್ರ ರಾವ್ ಹೇಳಿದರು.
ಸೋಮವಾರ ಎಂಜಿಎಂ ಕಾಲೇಜಿನ ಸಮೂಹ ಸಂಸ್ಥೆ ವತಿಯಿಂದ ಗಾಂಧಿ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆದ ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯಲ್ಲಿ ಉಪನ್ಯಾಸ ನೀಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿಯೇ ಕೃಷಿ ಭಾರತದ ಬೆನ್ನೆಲುಬು ಎಂದು ಸಾರಿ ಗಾಂಧೀಜಿ ಸಾವಯವ ಕ್ರಾಂತಿಯ ಮೂಲ ಪ್ರೇರಣೆಯಾದರು. ಶಾಸ್ತ್ರೀಜಿ ಪ್ರಧಾನಿಯಾಗಿದ್ದಾಗ ದೇಶದಲ್ಲಿನ ಆಹಾರ ಕೊರತೆಯನ್ನು ನೀಗಿಸಲು ಕೃಷಿಗೆ ವಿಶೇಷವಾದ ಒತ್ತನ್ನು ನೀಡಿದರು ಎಂದು ಅಭಿಪ್ರಾಯ ಪಟ್ಟರು.
ಶಾಸ್ತ್ರಿ ಒಪ್ಪತ್ತು
ದೇಶದಲ್ಲಿ ಆಹಾರ ಧಾನ್ಯ ಕೊರತೆಯಾದಾಗ ಶಾಸ್ತ್ರೀಜಿಯವರು ಪ್ರತಿ ಸೋಮವಾರದ ರಾತ್ರಿ ಉಪವಾಸ ಮಾಡಲು ಜನತೆಗೆ ಕರೆ ನೀಡಿದರು. ಅವರೂ ಉಪವಾಸ ಮಾಡಿ ತೋರಿಸಿದರು. ಜನರೂ ಆ ಹೊತ್ತಿಗೆ ಉಪವಾಸ ಮಾಡಿದ್ದು ಇತಿಹಾಸ. ಈಗಲೂ ಕೆಲವು ಹಿರಿಯರು ಶಾಸ್ತ್ರಿ ಒಪ್ಪತ್ತು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ಎಸ್. ನಾಯ್ಕ, ಪದವಿಪೂರ್ವ ಪ್ರಾಂಶುಪಾಲೆ ಮಾಲತಿ ದೇವಿ ಎ. ಸಂದೇಶ ನೀಡಿದರು. ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ವಿನೀತ್ ರಾವ್ ಸ್ವಾಗತಿಸಿ ವಂದಿಸಿದರು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಸುಚಿತ್ ಕೋಟ್ಯಾನ್ ನಿರೂಪಿಸಿದರು. ಸಂಸ್ಕೃತ ವಿಭಾಗ ಮುಖ್ಯಸ್ಥೆ ಡಾ. ವಸುಮತಿ ಭಟ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಂದ ರಾಮ್ ಧುನ್ ಭಜನ್ ನಡೆಯಿತು.