

ಕೆಜಿಎಫ್: ನಗರದ ಎಂ.ಜಿ.ಮಾರುಕಟ್ಟೆಗೆ ಬರುವ ಸಾರ್ವಜನಿಕರ ಹಿತದೃಷ್ಟಿಯಿಂದ 2 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಮಾರುಕಟ್ಟೆ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕಿ ರೂಪಕಲಾ ಶಶಿಧರ್ ಭರವಸೆ ನೀಡಿದರು.
ನಗರದ ಎಂಜಿ ಮಾರುಕಟ್ಟೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ನಗರದ ಹೃದಯ ಭಾಗದಲ್ಲಿರುವ ಎಂ.ಜಿ.ಮಾರುಕಟ್ಟೆಯ ಅಂಗಡಿ ಮಳಿಗೆಗಳ ಬಾಡಿಗೆ ಅನುದಾನದಲ್ಲಿ ಸಿಸಿ ರಸ್ತೆ, ಚರಂಡಿ, ಶೌಚಗೃಹ, ವಿದ್ಯುತ್ ದೀಪಗಳ ಅಳವಡಿಕೆ ಸೇರಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಕಾಮಗಾರಿ ಪ್ರಾರಂಭಿಸಲಾಗುತ್ತಿದ್ದು, 45 ದಿನಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಎಂ.ಜಿ. ಮಾರುಕಟ್ಟೆಯಲ್ಲಿ ಮುಕ್ತವಾಗಿ ವ್ಯಾಪಾರ ಮಾಡಲು ಹಾಗೂ ಶಿಥಿಲಗೊಂಡಿರುವ ಅಂಗಡಿಗಳ ನವೀಕರಣಕ್ಕೆ ಸಂಬಂಧಿಸಿದಂತೆ ನಗರಸಭೆಯಿಂದ ಅನುಮತಿ ಪಡೆಯಲು ಶಾಸಕರಿಗಾಗಲಿ, ನಗರಸಭೆ ಅಧ್ಯಕ್ಷರಾಗಲಿ, ಸದಸ್ಯರಿಗಾಗಲಿ ವ್ಯಾಪಾರಿಗಳು ಹಣ ನೀಡುವ ಅಗತ್ಯವಿಲ್ಲ. ನಿಮಗೆ ಯಾರ ಶಿಫಾರಸ್ಸಿನ ಅವಶ್ಯವಿಲ್ಲದೆ ನೇರವಾಗಿ ಅಂಗಡಿ ಮಾಲೀಕರು ನಗರಸಭೆ ಕಚೇರಿಯಲ್ಲಿ ಅಂಗಡಿಗಳ ನವೀಕರಣಕ್ಕೆ ಅರ್ಜಿ ಸಲ್ಲಿಸಿದ ಎರಡು ದಿನಗಳ ಒಳಗೆ ಶಿಥಿಲಗೊಂಡಿರುವ ಅಂಗಡಿಗಳನ್ನು ನವೀಕರಿಸಲು ಪರವಾನಗಿ ನೀಡಲಾಗುವುದು ಎಂದು ಅಂಗಡಿ ಮಾಲೀಕರಿಗೆ ತಿಳಿಸಿದರು. ಮಳೆ ಬಂದರೆ ಸೋರುವುದು, ಅಂಗಡಿ ಪ್ಲಾಸ್ಟಿಂಗ್ ಕಿತ್ತು ಹೋಗಿರುವುದು, ನೆಲಹಾಸು ರಿಪೇರಿ ಮಾಡಲು ಅಂಗಡಿ ಮಾಲೀಕರು ಮೂಲ ವಿನ್ಯಾಸಕ್ಕೆ ಧಕ್ಕೆ ಬಾರದಂತೆ ನವೀಕರಣಗೊಳಿಸಲು ನಗರಸಭೆಗೆ ಅರ್ಜಿ ಸಲ್ಲಿಸಿದರೆ ಎರಡು ದಿನಗಳಲ್ಲಿ ನವೀಕರಣಕ್ಕೆ ಪರವಾನಗಿ ನೀಡಲಾಗುತ್ತದೆ ಎಂದು ಪೌರಾಯುಕ್ತ ಪವನ್ಕುಮಾರ್ ತಿಳಿಸಿದರು.
ಅಂಗಡಿಗಳ ನವೀಕರಣಗೊಳಿಸಲು ಅಂಗಡಿಗಳ ಮಾಲೀಕರು ನಗರಸಭೆಗೆ ಯಾವುದೇ ಶುಲ್ಕವನ್ನು ಪಾವತಿಸುವಂತಿಲ್ಲ. ಅಂಗಡಿ ಮಾಲೀಕರು ನಗರಸಭೆ ಸದಸ್ಯರಿಗಾಲೀ ಅಥವಾ ಅಧ್ಯಕ್ಷರಿಗಾಗಲೀ ಯಾವುದೇ ಶುಲ್ಕವನ್ನು ಪಾವತಿಸಬೇಡಿ. ನೇರವಾಗಿ ನಗರಸಭೆಗೆ ಬಂದು ನಿಮ್ಮ ಕೆಲಸಗಳನ್ನು ಮಾಡಿಕೊಳ್ಳಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ, ಪೌರಾಯುಕ್ತ ಪವನ್ಕುಮಾರ್, ಎಇಇ ಮಂಜುನಾಥ್,
ಗುತ್ತಿಗೆದಾರ ಅರವಿಂದ್, ಮಾಜಿ ಆಧ್ಯಕ್ಷ ರಮೇಶ್ಜೈನ್, ನಗರಸಭೆ ಸದಸ್ಯರಾದ ಮಾಣಿಕ್ಯಂ, ಕರುಣಾಕರನ್, ರಮೇಶ್, ಶಾಲಿನಿ ನಂದಕುಮಾರ್, ಮಾರುಕಟ್ಟೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ದೇವೇಂದ್ರನ್ ಇತರರು ಇದ್ದರು.