

ಮಂಗಳೂರು: ಸ್ಟೇಟ್‌ಬ್ಯಾಂಕ್ ಬಳಿಯ ಬೀದಿ ಬದಿ ವ್ಯಾಪಾರಿಗಳ ವಲಯದಲ್ಲಿ ವ್ಯಾಪಾರ ಮಾಡಲು ಮೊದಲ ಹಂತದಲ್ಲಿ 93 ವ್ಯಾಪಾರಿಗಳಿಗೆ ಗುರುತಿನ ಚೀಟಿ ಆ.31ರಂದು ವಿತರಣೆ ಮಾಡಲಾಗುತ್ತಿದ್ದು, ಹಂತ ಹಂತವಾಗಿ 667 ಮಂದಿಗೂ ವಿವಿಧ ವಲಯಗಳಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾಹಿತಿ ನೀಡಿದ್ದಾರೆ.
ಮೇಯರ್ ಕಚೇರಿಯಲ್ಲಿ ಶುಕ್ರವಾರ ಫೋನ್ ಇನ್ ಕಾರ್ಯಕ್ರಮದಲ್ಲಿ ಟೈಗರ್ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ಅವರು ಫುಟ್‌ಪಾತ್‌ಗಳಲ್ಲಿ ವ್ಯಾಪಾರಕ್ಕೆ ಅವಕಾಶವಿಲ್ಲ. ಟೈಗರ್ ಕಾರ್ಯಾಚರಣೆಗೆ ಒಂದು ವರ್ಷಗಳ ಕಾಲ ಟೆಂಡರ್ ನೀಡಲಾಗಿದ್ದು, ನಿರಂತರ ಮುಂದುವರಿಯಲಿದೆ ಎಂದರು.
ವಲಯ ಆಯುಕ್ತರಾದ ರೇಖಾ ಶೆಟ್ಟಿ ಮಾತನಾಡಿ, ಸ್ಟೇಟ್ ಬ್ಯಾಂಕ್‌ನಲ್ಲಿರುವ ಬೀದಿ ಬದಿ ವ್ಯಾಪಾರಿಗಳ ವಲಯದಲ್ಲಿ ಹೂವಿನ ವ್ಯಾಪಾರಿಗಳಿಗೆ, ಫ್ಯಾನ್ಸಿ ಐಟಂ ಮಾರಾಟಗಾರರಿಗೆ, ತಿನಿಸು ತಯಾರಿಸುವ ಮಂದಿಗೆ, ಹಣ್ಣು, ತರಕಾರಿ ಮಾರಾಟಗಾರರಿಗೆ ಪ್ರತ್ಯೇಕವಾದ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲಿ ಅವರಿಗೆ ನೀಡುವ ಅಂಗಡಿಯ ಜತೆಗೆ ನೀರು, ವಿದ್ಯುತ್ ಪೂರೈಕೆಯನ್ನು ನೀಡಲಾಗುತ್ತದೆ ಎಂದರು.
ಕಾವೂರಿನಲ್ಲಿ ಗಾರ್ಡನ್/ಪೇ ಪಾಕಿರ್ಂಗ್: ಕಾವೂರಿನಲ್ಲಿ ಈಗಾಗಲೇ ಬೀದಿ ಬದಿಯ ವ್ಯಾಪಾರಿಗಳನ್ನು ತೆರವು ಮಾಡಿದ ಜಾಗದಲ್ಲಿ ಗಾರ್ಡನ್ ಅಥವಾ ಪೇ ಪಾಕಿರ್ಂಗ್ ಮಾಡುವ ವ್ಯವಸ್ಥೆಯನ್ನು ಮಾಡುವ ಕುರಿತು ಉದ್ಯಮದವರು ಮುಂದೆ ಬಂದಿದ್ದಾರೆ. ಶೀಘ್ರದಲ್ಲಿಯೇ ಇದರ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ಈಗಾಗಲೇ ತೆರವು ಮಾಡಿದ ವ್ಯಾಪಾರಿಗಳಿಗೆ ಕಾವೂರು ಮಾರುಕಟ್ಟೆ ಬಳಿ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಮೇಯರ್ ಮಾಹಿತಿ ನೀಡಿದರು.
ತೋಕೂರು-ತೊಕ್ಕೊಟ್ಟಲಿ ರೈಲು ನಿಲ್ಲಲಿ : ಪಾಂಡೇಶ್ವರ ರೈಲ್ವೆ ಕ್ರಾಸಿಂಗ್ ವಿಚಾರದಲ್ಲಿ ಅಂಡರ್ ಬ್ರಿಡ್ಜ್ ಅಥವಾ ಓವರ್ ಬ್ರಿಡ್ಜ್ ಯಾವುದು ಮಾಡಿದರೂ ಪ್ರಯೋಜನಕ್ಕೆ ಬರೋದಿಲ್ಲ. ಇದರ ಬದಲು ಪ್ಯಾಸೆಂಜರ್ ರೈಲಿನಲ್ಲಿ ಬರುವ ಮಂದಿಯನ್ನು ತೊಕೊಟ್ಟು ಹಾಗೂ ತೋಕೂರು ಬಳಿ ಇಳಿಸಿ ಅಲ್ಲೇ ರೈಲು ನಿಲ್ಲುವ ವ್ಯವಸ್ಥೆ ಮಾಡಬೇಕು ಎಂದು ಬ್ಯಾಂಕ್ ಉದ್ಯೋಗಿ ಬಿಜೈ ನಿವಾಸಿ ಬಿ.ಆರ್.ಪ್ರಭು ಸಲಹೆ ನೀಡಿದರು. ಈ ಸಂದರ್ಭ ಮೇಯರ್ ಡಿಆರ್‌ಎಂ ಹಾಗೂ ಎಂಪಿಗಳ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಲಾಗುವುದು ಎಂದರು.
ನೋ ಪಾಕಿರ್ಂಗ್ ನೋಟಿಸ್ ನೀಡಿಕೆ : ಬಿಜೈ ಭಾರತ್ ಮಾಲ್ ಸಮೀಪದಲ್ಲಿ ವಾಹನ ಸವಾರರು ಪಾಕಿರ್ಂಗ್ ಮಾಡುವ ಜಾಗದಲ್ಲಿ ಅಲ್ಲಿರುವ ಅಂಗಡಿಯವರು ಖಾಸಗಿ ಪಾಕಿರ್ಂಗ್‌ಗೆ ಮಾತ್ರ ವ್ಯವಸ್ಥೆಯಿದೆ ಎಂದು ಬೋರ್ಡ್ ಹಾಕುತ್ತಾರೆ ಎಂದು ಕುಲಶೇಖರದ ರತೀಶ್ ದೂರಿಗೆ ಮೇಯರ್ ಪ್ರತಿಕ್ರಿಯೆ ನೀಡಿ, ಈಗಾಗಲೇ ಡಿಸಿಪಿ ಅವರ ಜತೆ ನಡೆಸಿದ ಸಭೆಯಲ್ಲಿ ಗಮನ ಸೆಳೆಯಲಾಗಿದೆ. ಇಂತಹಗಳ ವಿರುದ್ಧ ನಗರ ಯೋಜನಾ ಅಧಿಕಾರಿಗಳು ನೋಟಿಸ್ ಕೂಡ ಜಾರಿ ಮಾಡಿದ್ದಾರೆ. ಕ್ರಮ ಜರುಗಿಸಲಾಗುತ್ತದೆ ಎಂದರು.
ಕೊಳಚೆ ನೀರು ಸೇರ್ಪಡೆ ಎನ್‌ಐಟಿಕೆ ಎಂಜಿನಿಯರ್: ಗುಜ್ಜರ ಕೆರೆಗೆ ತ್ಯಾಜ್ಯ ನೀರನ್ನು ಬೀಡುವ ಕುರಿತು ನೇಮು ಪೂಜಾರಿ ಅವರ ದೂರಿಗೆ ಮೇಯರ್ ಪ್ರತಿಕ್ರಿಯೆ ನೀಡಿ, ಈಗಾಗಲೇ ಎರಡು ಬಾರಿ ಮನಪಾ ಸೇರಿದಂತೆ ಕುಡೆಂಪ್ಸ್ ಎಂಜಿನಿಯರ್‌ಗಳನ್ನು ಕಳುಹಿಸಿ ತ್ಯಾಜ್ಯ ನೀರನ್ನು ಕೆರೆಗೆ ಬಿಡುವ ಕುರಿತು ಪತ್ತೆ ಹಚ್ಚಲು ಕಳುಹಿಸಲಾಗಿತ್ತು. ಆದರೂ ಪತ್ತೆ ಮಾಡಲು ಸಾಧ್ಯವಾಗಿಲ್ಲ ಈ ಬಾರಿ ಎನ್‌ಐಟಿಕೆಯ ಎಂಜಿನಿಯರ್‌ಗಳಿಂದ ಪ್ರತ್ಯೇಕ ಸರ್ವೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಮೇಯರ್ ಉತ್ತರ ನೀಡಿದರು. ಒಂದು ಗಂಟೆಗಳ ಕಾಲ ನಡೆದ ಕಾರ್ಯಕ್ರಮದಲ್ಲಿ 20ಕ್ಕೂ ಅಧಿಕ ಕರೆಗಳು ಬಂದಿತ್ತು. ಉಪಮೇಯರ್ ಸುನಿತಾ, ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ ಅಧ್ಯಕ್ಷ ವರುಣ್ ಚೌಟ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.