

ಮಂಗಳೂರು: ದೇಶದ ಇತರ ರಾಜ್ಯಗಳಿಗೆ ಹೋಲಿಸಿದಾಗ ರಾಜ್ಯದಲ್ಲಿ ಸದ್ಯ ಇರುವ ಒಂದು ವರ್ಷದ ಮೇಯರ್ ಅವಧಿ ಅತಿ ಕಡಿಮೆಯಾಗಿದೆ. ನಗರದ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಮೇಯರ್ ಅವಧಿ ವಿಸ್ತರಣೆ ಅಗತ್ಯವಿದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದರು.
ದ.ಕ. ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದ ವತಿಯಿಂದ ಗುರುವಾರ ಪತ್ರಿಕಾ ಭವನದಲ್ಲಿ ಆಯೋಜಿಸಲಾದ ಮೇಯರ್ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವಿಕೇಂದ್ರೀಕರಣ ಬಲವರ್ದನೆ ಬಗ್ಗೆ 2022ರ ಜನವರಿ 4ರಂದು ಸಭೆ ನಡೆದಿದ್ದು, ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ. ಭಕ್ತ ವತ್ಸಲ ಸಮಿತಿ ಸ್ಥಳೀಯ ಸಂಸ್ಥೆಗಳ ಮೇಯರ್ ಅವಧಿಯನ್ನು ಎರಡೂವರೆ ವರ್ಷಗಳ ಅವಧಿಗೆ ವಿಸ್ತರಿಸುವಂತೆ ಕೋರಿ ಶಿಫಾರಸ್ಸನ್ನು ಸರ್ಕಾರಕ್ಕೆ ಕಳುಹಿಸಿದೆ ಎಂದರು.
2022ರ ಮಾರ್ಚ್ ಮಾ.2ರಂದು ಮೇಯರ್ ಚುನಾವಣೆ ನಿಗದಿಯಾಗಿದ್ದರೂ ಕಾರಣಾಂತರಗಳಿಂದ ಚುನಾವಣೆ ಮಂದೂಡಲ್ಪಟ್ಟಿತ್ತು. ಇದರಿಂದಾಗಿ ಮೇಯರ್ ಆಗಿ ಎರಡು ಬೇಸಿಗೆ ಅವಧಿಯಲ್ಲಿ ಮಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುವ ಜವಾಬ್ಧಾರಿ ನನ್ನದಾಗಿತ್ತು. ಎಪ್ರಿಲ್, ಮೇ ತಿಂಗಳಲ್ಲಿ ಸಹಜವಾಗಿ ಮಂಗಳೂರು ನಗರದಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ. ಆದರೆ ತಮ್ಮ ಅವಧಿಯಲ್ಲಿ ನೀರಿನ ಮೂಲದಲ್ಲಿ ಯಾವುದೇ ಕೊರತೆ ಆಗಿರಲಿಲ್ಲ. ಆದರೆ ನಗರದಲ್ಲಿ ವರ್ಷದಿಂದ ವರ್ಷಕ್ಕೆ ನೀರಿನ ಬೇಡಿಕೆ ಹೆಚ್ಚುತ್ತದೆ. ಅದನ್ನು ನಿವಾರಿಸುವ ಸವಾಲನ್ನು ಸಮರ್ಥವಾಗಿ ಎದುರಿಸಿರುವ ತೃಪ್ತಿ ಇದೆ ಎಂದು ಪ್ರೇಮಾನಂದ ಶೆಟ್ಟಿ ಹೇಳಿದರು.