

ವಿಜಯಪುರ: ರಂಗೇರಿರುವ ಮಹಾನಗರ ಪಾಲಿಕೆ ಚುನಾವಣೆಯ ನಾಮಪತ್ರ ಪರಿಶೀಲನೆ ಪ್ರಕ್ರಿಯೆ ಮಂಗಳವಾರ ಮುಕ್ತಾಯಗೊಂಡಿದ್ದು, ಒಟ್ಟು 119 ಅರ್ಜಿಗಳು ತಿರಸ್ಕೃತಗೊಂಡಿದ್ದು, 235 ಕ್ರಮಬದ್ಧಗೊಂಡಿವೆ.
ನಗರದ 35 ವಾರ್ಡ್ಗಳಿಗೆ ನಾಮಪತ್ರ ಸಲ್ಲಿಸುವ ಅಂತಿಮ ದಿನವಾದ ಅ. 17ರಂದು ಒಂದೇ ದಿನ 211 ನಾಮಪತ್ರಗಳು ಸಲ್ಲಿಕೆಯಾಗುವ ಮೂಲಕ ಒಟ್ಟು 358 ನಾಮಪತ್ರಗಳು ಸಲ್ಲಿಕೆಯಾಗಿದ್ದವು.
ಮಂಗಳವಾರ ಬೆಳಗ್ಗೆಯಿಂದಲೇ ನಡೆದ ಪರಿಶೀಲನೆ ಕಾರ್ಯ ಸಂಜೆ 8 ಗಂಟೆಯವರೆಗೂ ಮುಂದವರಿದಿತ್ತು. ಸೂಕ್ಷ್ಮ ಪರಿಶೀಲನೆ ಬಳಿಕ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಲಾಗಿದ್ದು, ಆ ಪ್ರಕಾರ 119 ನಾಮಪತ್ರಗಳು ತಿರಸ್ಕೃತಗೊಂಡಿದ್ದಾಗಿ ಜಿಲ್ಲಾಡಳಿತ ತಿಳಿಸಿತು.
ಕಣದಿಂದ ಹಿಂದೆ ಸರಿಸಲು ತಯಾರಿ
ನಾಮಪತ್ರ ಹಿಂಪಡೆಯಲು ಅ. 20 ಅಂತಿಮ ದಿನವಾಗಿದ್ದು ಅಷ್ಟರಲ್ಲಿ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಸುವ ತಂತ್ರಗಾರಿಕೆಗೆ ಪ್ರಬಲ ಅಭ್ಯರ್ಥಿಗಳು ಮುಂದಾಗಿದ್ದಾರೆ. ಈಗಾಗಲೇ ಗುರು-ಹಿರಿಯರು, ಆಪ್ತರ ಮೂಲಕ, ಆಸೆ-ಆಮಿಷ ಒಡ್ಡುವ ಮೂಲಕ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಸುವ ತಂತ್ರಗಾರಿಕೆ ಜೋರಾಗಿ ನಡೆಯುತ್ತಿದೆ. ಇನ್ನು ಹೊಂದಾಣಿಕೆ ಸೂತ್ರದಡಿ ಪಕ್ಷೇತರರನ್ನು ಸೆಳೆಯುವ ಪ್ರಕ್ರಿಯೆ ಕೂಡ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳಿಂದ ಭರ್ಜರಿಯಾಗಿ ನಡೆಯುತ್ತಿದೆ. ಮತ್ತೊಂದೆಡೆ ಎದುರಾಳಿಗಳನ್ನು ಸೋಲಿಸಲು ಪಕ್ಷೇತರ ಅಭ್ಯರ್ಥಿಗಳು ದಾಳವಾಗುತ್ತಿರುವುದೂ ಕಂಡುಬಂದಿದೆ. ನಾಮಪತ್ರ ಹಿಂಪಡೆಯುವ ಅಂತಿಮ ಕ್ಷಣದವರೆಗೂ ಅಖಾಡ ಅಸ್ಪಷ್ಟವಾಗಲಿದೆ. ಅ. 20ರ ನಂತರವೇ ಅಂತಿಮ ಚಿತ್ರಣ ಹೊರ ಬೀಳಲಿದ್ದು ಆ ಬಳಿಕ ಪ್ರಚಾರ ಪ್ರಕ್ರಿಯೆ ಮತ್ತಷ್ಟು ಜೋರಾಗಲಿದೆ.
ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ರದ್ದತಿಗೆ ಆಗ್ರಹ
ನಗರದ ವಾರ್ಡ್ ನಂ. 18ರ ಕಾಂಗ್ರೆಸ್ ಅಭ್ಯರ್ಥಿ ಎಸ್. ದಿನೇಶ ಸೋಮಲಿಂಗಯ್ಯ ಸಲ್ಲಿಸಿದ ನಾಮಪತ್ರ ಗೊಂದಲಕಾರಿಯಾಗಿದ್ದು ಕೂಡಲೇ ರದ್ದುಪಡಿಸಲು ಆಗ್ರಹಿಸಿ ರವೀಂದ್ರ ಹನುಮಂತಪ್ಪ ಭಗವಂತಪ್ಪನವರ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದರು.
ಮಂಗಳವಾರ ನಾಮಪತ್ರ ಪರಿಶೀಲನೆ ವೇಳೆ ಜಿಲ್ಲಾಧಿಕಾರಿಗೆ ದೂರು ನೀಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಎಸ್. ದಿನೇಶ ಸೋಮಲಿಂಗಯ್ಯ ಇವರು ಮತದಾರರ ಪಟ್ಟಿಯನ್ನು ಅ. 10ರಿಂದ 14ರ ಅವಧಿಯಲ್ಲಿ ಮಹಾನಗರ ಪಾಲಿಕೆಯಿಂದ ಪಡೆದು ಚುನಾವಣೆ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಆದರೆ, ಚುನಾವಣೆ ದಿನಾಂಕ ಅ.3 ರಂದು ಪ್ರಕಟಗೊಂಡಿದೆ. ಅ. 10ರಂದು ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಆದರೆ, ಕಾಂಗ್ರೆಸ್ ಅಭ್ಯರ್ಥಿ ಮತದಾರರ ಪಟ್ಟಿಯನ್ನು ಮಹಾನಗರ ಪಾಲಿಕೆಯಿಂದ ಪಡೆದು ಚುನಾವಣೆ ಆಯೋಗಕ್ಕೆ ಸಲ್ಲಿಸಿದ್ದು ಅ. 10 ರಿಂದ 14ರ ನಡುವಿನ ಅವಧಿಯಲ್ಲಿ. ಇದು ನಿಯಮ ಬಾಹಿರವಾಗಿದ್ದು ಕೂಡಲೇ ನಾಮಪತ್ರ ರದ್ದು ಪಡಿಸಬೇಕೆಂದು ದೂರು ಸಲ್ಲಿಸಿದ್ದಾಗಿ ರವೀಂದ್ರ ಭಗವಂತಪ್ಪನವರ ತಿಳಿಸಿದ್ದಾರೆ.