

ಬೆಂಗಳೂರು: ತುಮಕೂರು ರಸ್ತೆ ಮೆಟ್ರೋ ಕಾಮಗಾರಿ ಕುರಿತು ಅಂಚೆಪಾಳ್ಯ ಗ್ರಾಮಸ್ಥರಿಗೆ ವಸ್ತುಸ್ಥಿತಿ ಮನವರಿಕೆ ಮಾಡಿಕೊಡಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ವಿಕಾಸಸೌಧದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್ ಸಮ್ಮುಖದಲ್ಲಿ ಜ.28ರಂದು ಉನ್ನತಾಧಿಕಾರಿಗಳ ಸಭೆ ನಡೆಯಲಿದೆ.
ಈ ಹಿಂದೆ ಅಂಚೆಪಾಳ್ಯದಲ್ಲಿ ಮೆಟ್ರೋ ನಿಲ್ದಾಣ ಸ್ಥಾಪಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಹೋರಾಟ ಮಾಡಿದ್ದರು. ಇದರಲ್ಲಿ ಭಾಗವಹಿಸಿದ್ದ ಪ್ರಮುಖ 15 ಮಂದಿಯನ್ನು ಸಭೆಗೆ ಆಹ್ವಾನಿಸಿ ಮೆಟ್ರೋ ಕಾಮಗಾರಿಯ ವಸ್ತುಸ್ಥಿತಿ ತಿಳಿಸುವ ಹಾಗೂ ಅವರ ಅನುಮಾನಗಳನ್ನು ಪರಿಹರಿಸಲಾಗುವುದು ಎನ್ನಲಾಗಿದೆ.
ಮುಕ್ಕಾಲು ಕಿ.ಮೀ. ನಡೆಯಬೇಕು: ಗಗನಚುಂಬಿ ಅಪಾರ್ಟ್ವೆುಂಟ್ ನಿವಾಸಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮೆಟ್ರೋರೈಲು ಮಾರ್ಗ ಕೊಂಡೊಯ್ಯಲಾಗಿದೆ. ತಮ್ಮ ಊರ ಬಳಿ ನಿಲ್ದಾಣ ಸ್ಥಾಪಿಸುತ್ತಿಲ್ಲ. ಗ್ರಾಮವು ಎರಡು ಮೆಟ್ರೋ ನಿಲ್ದಾಣಗಳ ಮಧ್ಯೆ ಇದ್ದರೂ, ಯಾವುದೇ ಕಡೆ ಹೋದರೂ ಮುಕ್ಕಾಲು ಕಿಲೋ ಮೀಟರ್ ನಡೆದು ಹೋಗಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ತಮ್ಮ ಗ್ರಾಮದ ಬಳಿಯೇ ಮೆಟ್ರೋ ನಿಲ್ದಾಣ ನಿರ್ವಿುಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್.ಆರ್. ವಿಶ್ವನಾಥ್, ಯೋಜನೆಯ ಸಮಗ್ರ ಮಾಹಿತಿಯನ್ನು ಗ್ರಾಮದ ಪ್ರಮುಖರಿಗೆ ನೀಡಿ ಅವರ ಸಂದೇಹಗಳನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮೆಟ್ರೋ ನಿಲ್ದಾಣಕ್ಕೆ ಜಿಂದಾಲ್ ಹೆಸರು ಬೇಡ
ಜಿಂದಾಲ್ ಮೆಟ್ರೋ ನಿಲ್ದಾಣ ಹೆಸರು ಬದಲಾವಣೆಗೆ ಚಿಕ್ಕಬಿದರಕಲ್ಲು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ನಿಲ್ದಾಣಕ್ಕೆ ಜಿಂದಾಲ್ ಆರ್ಥಿಕ ನೆರವು ನೀಡಿದರೆ ಮಾತ್ರ ಅದರ ಹೆಸರನ್ನು ನಾಮಕರಣ ಮಾಡಬಹುದು. ಇಲ್ಲದೇ ಹೋದರೆ ಗ್ರಾಮದ ಹೆಸರಿಡಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ. ಈ ವಿಷಯ ಕೂಡ ಉನ್ನತಾಧಿಕಾರಿಗಳ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆಯಿದೆ.
ಸಮಸ್ಯೆಗಳ ಸರಮಾಲೆ
2013-14ರಲ್ಲೇ ಈ ಮೆಟ್ರೋ ಮಾರ್ಗದ ಯೋಜನೆ ರೂಪಿಸಲಾಗಿತ್ತು. ಅಲ್ಲದೆ, ಈ ಹಂತದಲ್ಲಿ ಮಾರ್ಗ ಬದಲಿಸುವುದು ಕಷ್ಟ. ಈಗ ಮೆಟ್ರೋ ನಿಲ್ದಾಣಕ್ಕೆ ಗುರುತಿಸಿರುವ ಜಾಗ ಕೂಡ ನೈಸ್ ಸಂಸ್ಥೆಯ ಸುಪರ್ದಿಯಲ್ಲಿದ್ದು, ಇದನ್ನು ಪಡೆಯಲು ತಾಂತ್ರಿಕ ಸಮಸ್ಯೆ ಎದುರಾಗಿವೆ ಎಂದು ಮೂಲಗಳು ತಿಳಿಸಿವೆ.