ರಾಜಧಾನಿಯಲ್ಲಿ ಗಮನ ಸೆಳೆಯುತ್ತಿರುವ ಹಂಪಿ ರಥ

METRO ratha
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಹಂಪಿಯ ವಿಜಯವಿಠ್ಠಳ ದೇವಾಲಯ ಮುಂಭಾಗದಲ್ಲಿರುವ ಪ್ರಸಿದ್ಧ ಶಿಲಾ ರಥದ ಪ್ರತಿಕೃತಿಯನ್ನು ಇದೀಗ ರಾಜಧಾನಿಯ ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ಸ್ಥಾಪಿಸಲಾಗಿದೆ.

ನಮ್ಮ ಮೆಟ್ರೋ ಸೌಂದಯೀರ್ಕರಣ ಯೋಜನೆಯ ಅಂಗವಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​) ವಿಜಯನಗರ ಮೆಟ್ರೋ ನಿಲ್ದಾಣದ ಪ್ರಥಮ ಮಹಡಿಯಲ್ಲಿ 300 ಕೆ.ಜಿ. ತೂಕದ ರಥದ ಪ್ರತಿಕೃತಿಯನ್ನು ಸ್ಥಾಪಿಸಿದ್ದು, ಇಲ್ಲಿಗೆ ಬರುವ ಪ್ರಯಾಣಿಕರು ಈ ಪ್ರದರ್ಶನವನ್ನು ವೀಸುವುದು ಮಾತ್ರವಲ್ಲದೆ, ಪ್ರತಿಕೃತಿಯ ಮುಂಭಾಗದಲ್ಲಿ ನಿಂತು ಸೆಲ್ಫಿ, ಭಾವಚಿತ್ರಗಳನ್ನು ಕ್ಲಿಕ್ಕಿಸುತ್ತಿದ್ದಾರೆ.

ಹುಬ್ಬಳ್ಳಿಯಿಂದ ತಯಾರಿಸಲಾದ ಕಲಾಕೃತಿ: ಈ ರಥವನ್ನು ಹುಬ್ಬಳ್ಳಿಯ ಸುಮಂಗಲಾ ಭಟ್​ ನೇತೃತ್ವದ ಸೃಷ್ಟಿ ಆರ್ಟ್ಸ್​ ಸಂಸ್ಥೆ ನಿರ್ಮಿಸಿದ್ದು, ತಯಾರಿಗೆ ಫೈಬರ್​ ರೀನ್ಫೋರ್ಸ್ಡ್​ ಪ್ಲಾಸ್ಟಿಕ್​ ವಸ್ತುವನ್ನು ಬಳಸಲಾಗಿದೆ. ವಿಜಯನಗರ ಸಾಮ್ರಾಜ್ಯದ (14ರಿಂದ 17ನೇ ಶತಮಾನ) ಶಿಲ್ಪಕಲೆಯ ಶ್ರೇಷ್ಠತೆಯನ್ನು ಪ್ರತಿಬಿಂಬಿಸುವ ಈ 7.5 ಅಡಿ ಎತ್ತರ ಹಾಗೂ 7.5 ಅಡಿ ಅಗಲದ ರಥವನ್ನು ಮರದ ವೇದಿಕೆಯ ಮೇಲೆ ಇರಿಸಲಾಗಿದೆ. ನಿಲ್ದಾಣದ ಎರಡೂ ಬದಿಗಳಿಂದ ಪ್ರವೇಶಿಸುವ ಪ್ರಯಾಣಿಕರು ರಥದ ಪ್ರದರ್ಶನವನ್ನು ನೋಡಬಹುದು.

ಹಂಪಿಯ ಶಿಲಾರಥ ಭಾರತೀಯ ಸಂಸ್ಕತಿ, ಪರಂಪರೆಯ ಭಾಗವಾಗಿದೆ. ಅಲ್ಲದೆ ದೇಶದ ವೈಭವಯುತ ಇತಿಹಾಸಕ್ಕೆ ಸಾಕ್ಷಿಯಾಗಿದೆ. ನಾವು ಅದನ್ನು ಅತ್ಯಂತ ನಿಖರವಾಗಿ ತಯಾರಿಸಿದ್ದೇವೆ ಎಂದು ಸುಮಂಗಲಾ ಭಟ್​ ಅಭಿಪ್ರಾಯಪಟ್ಟಿದ್ದಾರೆ.

ರಥ ತಯಾರಿಸಲು ನಮ್ಮ ಮೆಟ್ರೋ ಅಧಿಕಾರಿಗಳು ಕೆಲವು ತಿಂಗಳ ಹಿಂದೆ ಸೂಚನೆ ನೀಡಿದ್ದರು. ನಾಲ್ಕರಿಂದ ಐದು ಕಲಾವಿದರು ಸುಮಾರು ನಾಲ್ಕು ತಿಂಗಳಲ್ಲಿ ಈ ಕೆಲಸ ಪೂರ್ಣಗೊಳಿಸಿದರು. ರಥವನ್ನು ಹುಬ್ಬಳ್ಳಿಯ ವರ್ಕ್​ಶಾಪ್​ನಲ್ಲಿ ತಯಾರಿಸಲಾಗಿದೆ. ಅದೇರೀತಿ ಬದಾಮಿ, ಧಾರವಾಡ, ಬಾಗಲಕೋಟೆ ಮತ್ತು ಮುನಿರಾಬಾದ್​ ರೈಲು ನಿಲ್ದಾಣಗಳ ಸೌಂದಯೀರ್ಕರಣ ಕಾರ್ಯಕ್ಕೂ ಸಂಸ್ಥೆ ಸಹಕರಿಸಿದೆ ಎಂದರು.

ಸೃಷ್ಟಿ ಆರ್ಟ್ಸ್​ ಸಂಸ್ಥೆಯ ಕಲಾಕೃತಿಗಳು ಈಗಾಗಲೇ ಬೆಳಗಾವಿ ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣಗಳಲ್ಲಿ, ಹುಬ್ಬಳ್ಳಿ ರೈಲು ಸಂಗ್ರಹಾಲಯದಲ್ಲಿ, ಹೈದರಾಬಾದ್​ನ ನಂಪಳ್ಳಿ ರೈಲು ನಿಲ್ದಾಣದಲ್ಲಿಯೂ ಪ್ರದರ್ಶಿತವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net