ಪಾವಗಡ: ವೈ.ಎನ್.ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ನಾಗಲಾಪುರದಲ್ಲಿ ಸೋಮವಾರ ಮೀಟರ್ ಬಡ್ಡಿದಂಧೆ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಾಗಲಾಪುರ ಗ್ರಾಮದ ಮಂಜುನಾಥ್(36) ಮೃತ. ಮಂಜುನಾಥ್ ಗ್ರಾಮದಲ್ಲಿ 20 ಲ ರೂ. ಸಾಲ ಪಡೆದಿದ್ದರು. ಪ್ರತಿ ಸೋಮವಾರ 50 ಸಾವಿರ ರೂ. ಬಡ್ಡಿ ಪಾವತಿಸಬೇಕಾಗಿತ್ತು. ಒಂದು ವೇಳೆ ಹಣ ಪಾವತಿಸದಿದ್ದರೆ ಬಡ್ಡಿ ಹಣಕ್ಕೂ ಹೆಚ್ಚುವರಿ ಬಡ್ಡಿ ಕಟ್ಟಬೇಕಾದ ಸಂಕಷ್ಟಕ್ಕೆ ಸಿಲುಕಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ.
ಈಗಾಗಲೇ ಸಾಲ ಪಡೆದ ಹಣದಲ್ಲಿ ಅರ್ಧದಷ್ಟನ್ನು ಬಡ್ಡಿ ರೂಪದಲ್ಲೆ ಸಾಲಗಾರರಿಗೆ ಪಾವತಿಸಿದ್ದಾರೆ. ಆದರೂ ಸಾಲ ತೀರಿಸಲಾಗದೆ, ಬಡ್ಡಿ ಹಣ ಕಟ್ಟಲಾಗದೇ ಕಂಗಾಲಾಗಿದ್ದ ಮಂಜುನಾಥ ಸೋಮವಾರ ಬಡ್ಡಿ ಹಣ ಪಾವತಿಗೆ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ವೈ.ಎನ್.ಹೊಸಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನ ಮೊಬೈಲ್ ವಶಪಡಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮಂಜುನಾಥಗೆ ಪತ್ನಿ ಲ್ಮ ಹಾಗೂ ತಂದೆ, ತಾಯಿ, ಮೂವರು ಪುತ್ರಿಯರು ಇದ್ದಾರೆ.