ಕೈಗೆಟಕುತ್ತಿದೆ ವಿದ್ಯುತ್ ಮಾರ್ಗ, ಮೈಮರೆತರೆ ಅಪಾಯ ನಿಶ್ಚಿತ

web 6
Published on

ತರೀಕೆರೆ: ಪಟ್ಟಣ ಹೊರವಲಯದ ಲಕ್ಕವಳ್ಳಿ ಕ್ರಾಸ್ ಬಳಿ ಕೃಷಿ ಜಮೀನಿನಲ್ಲಿ ಅಳವಡಿಸಿರುವ ವಿದ್ಯುತ್ ಕಂಬ ಸಂಪೂರ್ಣ ವಾಲಿಕೊಂಡಿದ್ದು, ತಂತಿಗಳು ಕೈಗೆಟುಕುವಂತಿವೆ.

ಸರ್ವೆ ನ.61/1ರ ಕೃಷಿ ಜಮೀನಿನಲ್ಲಿ ವಿದ್ಯುತ್ ಕಂಬವೊಂದು ಉರುಳುವ ಸ್ಥಿತಿಯಲ್ಲಿದೆ. ವಿದ್ಯುತ್ ಲೈನ್ ಹಾದುಹೋಗಿರುವ ಅಕ್ಕಪಕ್ಕದಲ್ಲಿ ಮನೆಗಳಿವೆ. ವ್ಯಾಪಾರ, ಉದ್ಯಮಗಳ ಸಣ್ಣಪುಟ್ಟ ಕಟ್ಟಡಗಳಿವೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ನಿಶ್ಚಿತ ಎಂಬ ಪರಿಸ್ಥಿತಿ ಇದೆ.

ಧರೆಗುರುಳುವ ಸ್ಥಿತಿಯಲ್ಲಿರುವ ವಿದ್ಯುತ್ ಕಂಬ ಬದಲಾಯಿಸಿ ಜೋತುಬಿದ್ದಿರುವ ವಿದ್ಯುತ್ ಲೈನ್ ಸರಿಪಡಿಸಬೇಕೆಂದು ಎರಡು ವರ್ಷಗಳಿಂದ ಮನವಿ ಮಾಡಿದರೂ ಮೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ.

ಪಾಳು ಬಿದ್ದಿರುವ ಭೂಮಿಯಲ್ಲಿ ಪ್ರತಿದಿನ ಸುತ್ತಮುತ್ತ ಜಾನುವಾರುಗಳು ಮೇಯುತ್ತವೆ. ಜಾನುವಾರು ಮೇಯಿಸಲು ಬರುವ ದನಗಾಹಿಗಳು ಕೈಗೆಟಕುವಂತಿರುವ ವಿದ್ಯುತ್ ಲೈನ್ ಕೆಳಗಡೆಯೇ ಒಮ್ಮೊಮ್ಮೆ ಹಾದುಹೋಗುವ ಅನಿವಾರ್ಯತೆ ಇದೆ. ಈ ವೇಳೆ ಸ್ವಲ್ಪ ಮೈಮರೆತರೂ ಅಪಾಯ ಕಟ್ಟಿಟ್ಟ ಬುತ್ತಿ. ಅನಾಹುತ ಸಂಭವಿಸುವ ಮುಂಚೆ ಮೆಸ್ಕಾಂ ಅಧಿಕಾರಿಗಳು ಎಚ್ಚೆತ್ತು ಕಂಬ ಬದಲಾಯಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net