ವಿದ್ಯುತ್ ಸಂಪರ್ಕ ಯಾವಾಗ ?

TP
Published on

ಶೃಂಗೇರಿ: ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದ ಮೆಸ್ಕಾಂ, ಮರ ತೆರವುಗೊಳಿಸಲು ಬಿಡದ ಅರಣ್ಯ ಇಲಾಖೆ ವಿರುದ್ಧ ತಾಪಂ ಸಭೆಯಲ್ಲಿ ಅಧ್ಯಕ್ಷೆ ಜಯಶೀಲಾ ಚಂದ್ರಶೇಖರ್ ಹರಿಹಾಯ್ದರು.

ತಾಪಂನಲ್ಲಿ ಗುರುವಾರ ಆಯೋಜಿಸಿದ್ದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. ಒಂಬತ್ತು ಗ್ರಾಪಂನ ಹಲವು ಕಡೆ ವಿದ್ಯುತ್ ಸಂಪರ್ಕವಿಲ್ಲ. ಸೀಮೆಎಣ್ಣೆ ದೊರಕುತ್ತಿಲ್ಲ. ಮೀನಗರಡಿ, ಕಚಿಗೆ, ಮುಂಡೋಡಿ ಮುಂತಾದ ಕಡೆದ ಜನರಿಗೆ ಕರೆಂಟ್ ಭಾಗ್ಯ ಇನ್ನೂ ದೊರಕಿಲ್ಲ. ಹಲವು ಗ್ರಾಪಂಗಳಲ್ಲಿ ಟಿಸಿ ಸಂಪರ್ಕ ಇನ್ನೂ ಆಗಿಲ್ಲ. ಸರ್ಕಾರ ವಿದ್ಯುತ್ ಭಾಗ್ಯಯೋಜನೆ ಸಮಾಜದ ಕಟ್ಟಕಡೆಯ ಜನರಿಗೆ ತಲುಪಬೇಕು ಎಂಬ ಆಶಯ ಹೊಂದಿದೆ. ಆದರೆ ಹಲವು ಕಡೆ ವಿದ್ಯುತ್ ಸಂಪರ್ಕ ನೀಡಲು ಅರಣ್ಯ ಇಲಾಖೆ ಅಡ್ಡಿ ಮಾಡುತ್ತಿದೆ. ಈ ಕುರಿತು ಅರಣ್ಯ ಇಲಾಖೆ ಜತೆ ರ್ಚಚಿಸಲು ಇಲಾಖೆ ಅಧಿಕಾರಿಗಳು ಹಾಜರಾಗಿಲ್ಲ. ನೆಮ್ಮಾರ್ ಗ್ರಾಪಂ ಬಿಸಿಎಂ ಹಾಸ್ಟೆಲ್ ಎದುರು ಇರುವ ನೀಲಗಿರಿ ಮರಗಳನ್ನು ಕತ್ತರಿಸುವಂತೆ ಅರಣ್ಯ ಇಲಾಖೆಗೆ ಸೂಚಿಸಿದರೂ ಪ್ರಯೋಜನವಾಗಿಲ್ಲ ಎಂದು ಹರಿಹಾಯ್ದರು.

ಮೆಸ್ಕಾಂ ಮೂರು ತಿಂಗಳಿಗೊಮ್ಮೆ ಮಾಡುವ ಜನಸಂಪರ್ಕ ಸಭೆ ಕುರಿತು ಪ್ರತಿ ಗ್ರಾಮದಲ್ಲೂ ಪ್ರಚಾರ ಮಾಡಬೇಕು. ಜನರ ಸಮಸ್ಯೆ ಪರಿಹರಿಸಲು ಸಭೆ ಮಾಡುತ್ತೇವೆ. ಕಾಟಾಚಾರಕ್ಕಾಗಿ ಮಾಡುವುದನ್ನು ನಿಲ್ಲಿ್ಲಬೇಕು. ಮುಂದೆ ಸಭೆ ಮಾಡುವಾಗ ಹೆಚ್ಚಿನ ಪ್ರಚಾರ ಮಾಡಿ. ಜನರು ಸಭೆಗೆ ಬಂದು ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ ಎಂದು ಮೆಸ್ಕಾಂ ಅಧಿಕಾರಿ ಪ್ರಶಾಂತ್ ಅವರಿಗೆ ಸಲಹೆ ನೀಡಿದರು.

ಪ್ರಶಾಂತ್ ಮಾತನಾಡಿ, ತಾಲೂಕಿನ ಮೂವರು ಫಲಾನುಭವಿಗಳಿಗೆ ನೀಡಿದ ಗಂಗಾ ಕಲ್ಯಾಣ ಯೋಜನೆ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ದೀನದಯಾಳ್ ಯೋಜನೆಯಡಿ ಹಲವು ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದು ತಿಳಿಸಿದರು.

ನೋಟಿಸ್ ನೀಡಲು ಸೂಚನೆ: ತಾಪಂ ಮಾಸಿಕ ಪ್ರಗತಿ ಪರಿಶೀಲನಾ ಸಭೆಗೆ ತಾಲೂಕಿನ ಅಧಿಕಾರಿಗಳ ಹಾಜರಾತಿ ಕಡಿಮೆ ಇದ್ದುದರಿಂದ ಸಿಟ್ಟಾದ ತಾಪಂ ಅಧ್ಯಕ್ಷೆ ಜಯಶೀಲಾ ಚಂದ್ರಶೇಖರ್ ಅವರು ಗೈರಾದವರಿಗೆ ನೋಟಿಸ್ ನೀಡುವಂತೆ ಇಒ ಜಯರಾಂ ಅವರಿಗೆ ಸೂಚಿಸಿದರು.

ತಾಲೂಕಿನ ಎಲ್ಲ ಇಲಾಖೆಯ ಪ್ರಗತಿಯ ಕುರಿತು ಕರೆಯುವ ಸಭೆಗೆ ಅಧಿಕಾರಿಗಳು ಹಾಜರಾಗುತ್ತಿಲ್ಲ. ಸಭೆಗೆ ಬಾರದ ಕುರಿತು ಫೋನ್ ಮುಖಾಂತರವೂ ತಿಳಿಸುತ್ತಿಲ್ಲ. ಮಾಹಿತಿ ಕೊಡಬೇಕಾದ ಅಧಿಕಾರಿಗಳು ಇಲಾಖೆ ಸಿಬ್ಬಂದಿಯನ್ನು ಸಭೆಗೆ ಕಳಿಸಿದ್ದಾರೆ. ಇದರಿಂದ ಸಭೆಗೆ ಪ್ರಯೋಜನವಿಲ್ಲ ಎಂದು ಹರಿಹಾಯ್ದರು.

ಇಲಾಖೆಯ ಮುಖ್ಯಸ್ಥರು ಸಭೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ನಮಗೆ ಸರಿಯಾದ ಮಾಹಿತಿ ನೀಡಬೇಕು. ನಾವು ಸಮಯ ವ್ಯರ್ಥ ಮಾಡಲು ಸಭೆ ಕರೆದಿಲ್ಲ. ಜನರು ಕೇಳಿದ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಸರಿಯಾದ ಉತ್ತರ ನೀಡಬೇಕು. ಹಾಗಾಗಿ ಮುಂದಿನ ಸಭೆಗೆ ಅಧಿಕಾರಿಗಳು ಮಾತ್ರ ಹಾಜರಾಗಬೇಕು ಎಂದು ತಾಕೀತು ಮಾಡಿದರು.

ಮೀನುಗಾರಿಕೆ ಇಲಾಖೆ ಇದೆಯೇ?: ಮೀನುಗಾರಿಕೆ ಇಲಾಖೆ ತಾಲೂಕಿನಲ್ಲಿ ಇದೆಯೇ?...ಹೀಗೆ ಸಭೆಯಲ್ಲಿ ಪ್ರಶ್ನಿಸಿದವರು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಿ.ಪ್ರವೀಣ್. ಮೀನುಗಾರಿಕೆ ಇಲಾಖೆ ಯೋಜನೆಗಳು, ಕಾರ್ಯದ ಕುರಿತು ತಾಪಂಗೆ ಸೂಕ್ತ ಮಾಹಿತಿ ನೀಡದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಅಕ್ಟೋಬರ್ ಅನುಪಾಲನಾ ವರದಿ ಫೆಬ್ರವರಿಯಲ್ಲಿ ತಾಪಂ ಕಚೇರಿಗೆ ನೀಡಿದ್ದೀರಿ. ಕೆರೆಗಳಿಗೆ ಎಷ್ಟು ಮೀನು ಬಿಟ್ಟಿದ್ದೀರಿ? ಮತ್ಸ್ಯ ಪಾಲನೆಗೆ ಖಾಸಗಿ ಕೆರೆಗಳಿಗೆ ಎಷ್ಟು ಮೀನು ಮರಿ ನೀಡಿದ್ದೀರಿ ಎಂದು ಒಂದಷ್ಟು ಮಾಹಿತಿ ನೀಡುತ್ತೀರಿ ಎಂದು ಹರಿಹಾಯ್ದರು. ಇಲಾಖೆ ಅಧಿಕಾರಿಗಳು ಸ್ಪಷ್ಟ ಮಾಹಿತಿ ಸಭೆಗೆ ನೀಡಬೇಕು ಎಂದು ಮೀನುಗಾರಿಕೆ ಇಲಾಖೆ ಸಿಬ್ಬಂದಿ ಸಿ.ಆರ್.ಕವನಾ ಅವರಿಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net