

ಬೆಂಗಳೂರು: ನೀವು ಬ್ಯಾಚೆಲರ್ಸ್ಗೆ ಮನೆ ಬಾಡಿಗೆಗೆ ಕೊಟ್ಟಿದ್ದೀರಾ ಅಥವಾ ಅವಿವಾಹಿತರು ನಿಮ್ಮ ಮನೆ, ಫ್ಲ್ಯಾಟ್, ಅಪಾರ್ಟ್ಮೆಂಟ್ಗಳಲ್ಲಿ ಒಬ್ಬರೇ ನೆಲೆಸಿದ್ದಾರಾ? ಹಾಗಿದ್ದರೆ ಅವರ ಮೇಲೊಂದು ಕಣ್ಣಿಡಿ.
ಡ್ರಗ್ಸ್ ಮಾಫಿಯಾ ನಿಯಂತ್ರಿಸುವ ಸಲುವಾಗಿ ಸರ್ಕಾರ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಪೊಲೀಸರು ಈ ಹಿನ್ನೆಲೆಯಲ್ಲಿ ನಗರದಲ್ಲಿ ಏಕಾಂಗಿಯಾಗಿ ವಾಸಿಸುತ್ತಿರುವ ಅವಿವಾಹಿತರ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ.
ಅದಕ್ಕಾಗಿ ಪೊಲೀಸರು ಎಲ್ಲ ಅಪಾರ್ಟ್ಮೆಂಟ್, ಫ್ಲ್ಯಾಟ್ಗಳಲ್ಲಿ ನೆಲೆಸಿರುವ ಬ್ಯಾಚೆಲರ್ಸ್ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಹೀಗಾಗಿ ನೀವು ನಿಮ್ಮ ನಿಮ್ಮ ಮನೆ, ಅಪಾರ್ಟ್ಮೆಂಟ್, ಫ್ಲ್ಯಾಟ್ಗಳಲ್ಲಿ ಒಬ್ಬರೇ ವಾಸಿಸುತ್ತಿರುವ ಅವಿವಾಹಿತರ ಹೆಸರು, ಫೋನ್ ನಂಬರ್ ಇತ್ಯಾದಿ ಮಾಹಿತಿ ಸಂಗ್ರಹಿಸಿಡಿ. ಮಾತ್ರವಲ್ಲ ಅವರು ರಾತ್ರಿ ಮನೆಗೆ ತಡವಾಗಿ ಬರುತ್ತಿದ್ದರೆ, ತಡರಾತ್ರಿ ಪಾರ್ಟಿ ಮಾಡಿ ಗದ್ದಲ ಮಾಡುತ್ತಿದ್ದರೆ, ಅನುಮಾನಾಸ್ಪದ ಚಟುವಟಿಕೆಗಳಲ್ಲಿ ತೊಡಗಿದ್ದರೆ ಪೊಲೀಸರಿಗೆ ತಿಳಿಸಿ.. ಇಂಥದ್ದೊಂದು ಸಂದೇಶ ವಾಟ್ಸ್ಯಾಪ್-ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದ್ದು, ಅವಿವಾಹಿತರನ್ನು ಚಿಂತೆಗೀಡು ಮಾಡಿತ್ತು.
ಮೊದಲೇ ಬೆಂಗಳೂರಿನಲ್ಲಿ ಬ್ಯಾಚೆಲರ್ಸ್ಗೆ ಮನೆ ಸಿಗುವುದು ಕಷ್ಟ. ಹಾಗಾದರೆ ಅವಿವಾಹಿತರು ಮಾತ್ರ ಡ್ರಗ್ಸ್ ತೆಗೆದುಕೊಳ್ಳುತ್ತಾರಾ? ಇದೆಂಥ ರೂಲ್ಸ್? ಇದು ನಿಜವೇ? ಎಂಬಿತ್ಯಾದಿ ಕಮೆಂಟ್ಸ್ ಇವುಗಳಿಗೆ ಬಂದಿದ್ದು ತೀವ್ರ ಅಸಮಾಧಾನ ವ್ಯಕ್ತವಾಗಿತ್ತು.
ಇದು ಬೆಂಗಳೂರಿನ ಕಾಡುಗೋಡಿ/ವೈಟ್ಫೀಲ್ಡ್ ಸುತ್ತಲಿನ ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್ಗಳಲ್ಲಿ ಹರಿದಾಡುತ್ತಿರುವ ಮೆಸೇಜ್ ಎನ್ನಲಾಗುತ್ತಿದ್ದು, ನೆಟ್ಟಿಗರು ಇದರ ಬಗ್ಗೆ ಟ್ವಿಟರ್ ಮೂಲಕ ಬೆಂಗಳೂರು ಪೊಲೀಸರ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಪೊಲೀಸರು ಪ್ರತಿಕ್ರಿಯಿಸಿದ್ದು, ಅಂತಹ ಯಾವುದೇ ನೋಟಿಸ್/ಸುತ್ತೋಲೆ ಕಾಡುಗೋಡಿ ಅಥವಾ ವೈಟ್ಫೀಲ್ಡ್ ಪೊಲೀಸ್ ಸ್ಟೇಷನ್ಗಳಿಂದ ಹೊರಡಿಸಿಲ್ಲ ಎಂಬ ಸ್ಪಷ್ಟನೆ ನೀಡಿದ್ದಾರೆ. ಸುಳ್ಳು ಮಾಹಿತಿ ಹರಿದಾಡಿದ್ದರಿಂದ ಚಿಂತೆಗೀಡಾಗಿದ್ದ ಬ್ಯಾಚೆಲರ್ಸ್ ಕೊನೆಗೂ ಪೊಲೀಸರ ಸ್ಪಷ್ಟನೆಯಿಂದಾಗಿ ನಿರಾಳರಾಗುವಂತಾಗಿದೆ.