

ವೆಂಕಟರಾಜು ಎಸ್. ದೊಡ್ಡಬಳ್ಳಾಪುರ
ಕರೊನಾ ಸೋಂಕಿನಿಂದ ಜನಸಾಮಾನ್ಯರು ತತ್ತರಿಸುತ್ತಿದ್ದಾರೆ. ಇದರ ನಡುವೆ ಸಮರ್ಪಕ ಚಿಕಿತ್ಸೆ ಸಿಗದೆ ಸಾಮಾನ್ಯ ರೋಗಿಗಳ ಪರದಾಟ ಹೇಳತೀರದಾಗಿದೆ.
ಇದರ ನಡುವೆ ಮೂತ್ರಪಿಂಡ ವೈಲ್ಯಕ್ಕೆ ಒಳಗಾಗಿ, ವಾರದಲ್ಲಿ ಮೂರು ಅಥವಾ ನಾಲ್ಕು ಬಾರಿ ಡಯಾಲಿಸಿಸ್‌ಗೆ ಒಳಗಾಗಬೇಕಾದ ರೋಗಿಗಳ ಪಾಡು ದೇವರಿಗೇ ಪ್ರೀತಿ ಎನ್ನುವಂತಾಗಿದೆ!
ದೊಡ್ಡಬಳ್ಳಾಪುರ ಸೇರಿ ರಾಜ್ಯದ ಬಹುತೇಕ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಡಯಾಲಿಸ್ ಕೇಂದ್ರದ ನಿರ್ವಹಣೆ ಗುತ್ತಿಗೆಯನ್ನು ಬಿಆರ್‌ಎಸ್ ಎಂಬ ಸಂಸ್ಥೆ ವಹಿಸಿಕೊಂಡಿದೆ. ಆದರೆ, ಕರೊನಾ ಪಿಡುಗಿನ ನೆಪ ಹೇಳಿ, ಈ ಸಂಸ್ಥೆ ಸಿಬ್ಬಂದಿ ರೋಗಿಗಳ ಜೀವದೊಂದಿಗೆ ಚೆಲ್ಲಾಟ ಆಡುತ್ತಿದ್ದು, ಇದರ ಪರಿಣಾಮ ದೊಡ್ಡಬಳ್ಳಾಪುರವೊಂದರಲ್ಲೇ ಕಳೆದೊಂದು ತಿಂಗಳಲ್ಲಿ ಐವರು ರೋಗಿಗಳು ಮೃತಪಟ್ಟಿದ್ದಾರೆ.
ವಾರಕ್ಕೆರಡು ಬಾರಿ ಡಯಾಲಿಸಿಸ್: ಮೂತ್ರಪಿಂಡ ವೈಲ್ಯಕ್ಕೆ ಒಳಗಾದವರಿಗೆ ಸಾಮಾನ್ಯವಾಗಿ ದಿನ ಬಿಟ್ಟು ದಿನದಂತೆ ವಾರದಲ್ಲಿ ನಾಲ್ಕು ಬಾರಿ ಡಯಾಲಿಸಿಸ್ ಮಾಡಲಾಗುತ್ತದೆ. ಆದರೆ, ಕರೊನಾ ನೆಪವೊಡ್ಡಿ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿ ವಾರಕ್ಕೆ ಎರಡು ಬಾರಿ ಮಾತ್ರ ಡಯಾಲಿಸಿಸ್ ಮಾಡಲಾಗುತ್ತಿದೆ. ಪರಿಣಾಮ ರೋಗಿಗಳ ಆರೋಗ್ಯಸ್ಥಿತಿ ಹದಗೆಟ್ಟು, ಮೃತಪಡುತ್ತಿದ್ದಾರೆ ಎಂದು ಮೃತ ರೋಗಿ ಸಂಬಂಧಿಕರು ದೂರಿದ್ದಾರೆ.
ಕರೊನಾ ಪಿಡುಗು ಆರಂಭಕ್ಕೂ ಮುನ್ನ ಎಲ್ಲವೂ ಸರಿಯಿತ್ತು. ಆಗ ವಾರಕ್ಕೆ ನಾಲ್ಕು ಬಾರಿ ಡಯಾಲಿಸಿಸ್ ಮಾಡಲಾಗುತ್ತಿತ್ತು. ಆದರೆ ಕ್ರಮೇಣ ಅದು ಮೂರಕ್ಕೆ ಇಳಿಕೆಯಾಗಿ, ಈಗ ಎರಡಕ್ಕೆ ಬಂದು ನಿಂತಿದೆ. ಈ ಸಮಸ್ಯೆ ಕಳೆದೆರಡು ತಿಂಗಳಿಂದ ಇದೆ. ಮಂಗಳವಾರ ಮತ್ತು ಶುಕ್ರವಾರ ಮಾತ್ರ ಡಯಾಲಿಸಿಸ್ ಮಾಡಲಾಗುತ್ತಿದೆ ಎಂದು ರೋಗಿಗಳು ಆರೋಪಿಸಿದ್ದಾರೆ.
ಮನವಿಗೂ ಸ್ಪಂದಿಸದ ಸಂಸ್ಥೆ: ಡಯಾಲಿಸಿಸ್ ಸರಿಯಾಗಿ ಆಗದ ಕಾರಣ ರೋಗಿಗಳಾದ ತೇಜೋವತಿ ಎಂಬುವರು ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ. ಇದಕ್ಕೂ ಮುನ್ನ ವೆಂಕಟರಮಣಪ್ಪ, ವೀಣಾ, ಲಾವಣ್ಯಾ, ರಾಘವೇಂದ್ರ ಮತ್ತು ಸುರೇಶ್ ಎಂಬುವವರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಬಿಆರ್‌ಎಸ್ ಕಚೇರಿಗೆ ತೆರಳಿದ್ದ ರೋಗಿಗಳು, ಆ ಕೇಂದ್ರದ ಸಿಬ್ಬಂದಿಗೆ ವಾರದಲ್ಲಿ ಮೂರು ಬಾರಿ ಡಯಾಲಿಸಿಸ್ ಮಾಡುವಂತೆ ಸೂಚಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು. ಆದರೆ, ಬಿಆರ್‌ಎಸ್ ಅಧಿಕಾರಿಗಳು ಇದಕ್ಕೆ ಸ್ಪಂದಿಸಿಲ್ಲ.
ಜಾರಿಯಾಗದ ವಜಾ ಆದೇಶ: ಡಯಾಲಿಸಿಸ್‌ಗೆ ಬರುವ ರೋಗಿಗಳು ಚಿಕಿತ್ಸೆಗೆ ಅಗತ್ಯವಾದ ಸೂಜಿಯನ್ನು ಕೂಡ ರೋಗಿಗಳೇ ತರುವಂತೆ ಬಿಆರ್‌ಎಸ್ ಸಿಬ್ಬಂದಿ ಸೂಚಿಸುತ್ತಿದ್ದರು. ಜತೆಗೆ ಕೇಂದ್ರದಲ್ಲಿ ಅನೈರ್ಮಲ್ಯವಿತ್ತು. ಜತೆಗೆ ಕರೊನಾ ಸಂದರ್ಭದಲ್ಲಿ ಡಯಾಲಿಸಿಸ್ ಕೇಂದ್ರಕ್ಕೆ ಬೀಗ ಜಡಿದಿದ್ದ ಸಿಬ್ಬಂದಿ ಕ್ರಮವನ್ನು ಖಂಡಿಸಿ ರೋಗಿಗಳು ವೈದ್ಯಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಇದನ್ನು ಆಧರಿಸಿ ಅವರು ಕೇಂದ್ರದ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸುವುದಾಗಿ ಹೇಳಿದ್ದರು. ಆದರೆ ಆ ಆದೇಶ ಮಾತಿಗೆ ಸೀಮಿತವಾಗಿದೆ.
ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡುವುದರಿಂದ ಪ್ರಯೋಜನವಿಲ್ಲ. ಕನಿಷ್ಠ ಮೂರು ಬಾರಿ ಮಾಡಲೇಬೇಕು. ಇಲ್ಲದಿದ್ದರೆ ಹೆಚ್ಚಿನ ನೀರಿನಾಂಶ ಶೇಖರಣೆಯಾಗಿ ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಇದರಿಂದ ಸಾವೂ ಸಂಭವಿಸಬಹುದು. ಹೆಸರು ಹೇಳಲಿಚ್ಛಿಸದ ರೋಗಿಗಳು ಡಯಾಲಿಸಿಸ್ ಕೇಂದ್ರದಲ್ಲಿನ ಸಮಸ್ಯೆಕುರಿತು ಗುತ್ತಿಗೆದಾರ ಸಂಸ್ಥೆ ಬಿಆರ್‌ಎಸ್ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇವೆ. ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ. ಆದರೆ ಈವರೆಗೆ ಏನೊಂದೂ ಬದಲಾಗಿಲ್ಲ. ಡಾ. ರಮೇಶ್ ಸರ್ಕಾರಿ ಆಸ್ಪತ್ರೆ ಮುಖ್ಯಾಧಿಕಾರಿ ಡಯಾಲಿಸಿಸ್ ಕೇಂದ್ರದ ಸಮಸ್ಯೆ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಬಿಆರ್‌ಎಸ್ ಸಂಸ್ಥೆಯವರಿಗೆ ಹೇಳಿ, ಹೇಳಿ ಸಾಕಾಗಿದೆ. ಈ ವಿಷಯವಾಗಿ ಮತ್ತೊಮ್ಮೆ ಜಿಲ್ಲಾ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಟಿ. ವೆಂಕಟರಮಣಯ್ಯ ದೊಡ್ಡಬಳ್ಳಾಪುರ ಶಾಸಕ