

ಎನ್.ಆರ್.ಪುರ: ಪಟ್ಟಣದ ಮೆಸ್ಕಾಂ ಕಚೇರಿಯಲ್ಲಿ ಸ್ಥಿರ ದೂರವಾಣಿ ಇಲ್ಲ, ಲೈನ್‌ಮ್ಯಾನ್‌ಗಳ ಮೊಬೈಲ್‌ಗಳು ನಾಟ್ ರೀಚೆಬಲ್ ಆಗಿರುತ್ತವೆ. ಯಾವಾಗ ವಿದ್ಯುತ್ ಸ್ಥಗಿತಗೊಳಿಸುತ್ತಾರೋ ತಿಳಿಯದು. ಯಾವಾಗ ತ್ರೀ ಫೇಸ್ ವಿದ್ಯುತ್ ನೀಡುತ್ತೀರಾ ಎಂಬ ಬಗ್ಗೆ ಮಾಹಿತಿಯೇ ಇಲ್ಲದಂತಾಗಿದೆ. ಮನಬಂದಂತೆ ಪವರ್ ಕಟ್ ಮಾಡುವುದೊಂದೇ ನಿಮ್ಮ ಕೆಲಸ ಎಂದು ರೈತರು ಮೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ನಡೆದ ಜನಸಂಪರ್ಕ ಸಭೆಯಲ್ಲಿ ವಿದ್ಯುತ್ ಬಳಕೆದಾರರ ಸಂಘದ ಕಾರ್ಯದರ್ಶಿ ಪಿ.ಕೆ.ಬಸವರಾಜ್ ಮಾತನಾಡಿ, ವಿದ್ಯುತ್ ಸಂಪರ್ಕ ಪಡೆಯಲು ಯಾವ ದಾಖಲೆಗಳು ಬೇಕು ಎಂದು ಗ್ರಾಹಕರಿಗೆ ಒಮ್ಮೆಯೇ ಪಟ್ಟಿಕೊಡಿ. ಪದೇ ಪದೆ ದಾಖಲಾತಿಗಳಿಗಾಗಿ ಅಲೆದಾಡಿಸಬೇಡಿ ಎಂದು ಹೇಳಿದರು.
ಮೆಸ್ಕಾಂನಿಂದ ಪರವಾನಗಿ ಪಡೆದ ಗುತ್ತಿಗೆದಾರರ ಮಾಹಿತಿ ಪ್ರಕಟಿಸಬೇಕು. ಇಲಾಖೆ ಕಡತಗಳು ಇಲಾಖೆಗೆ ಸಂಬಂಧಿಸದವರ ಕೈಯಲ್ಲಿವೆ. ವಿದ್ಯುತ್ ವ್ಯತ್ಯಯದಿಂದಾಗಿ ರೈತರ ಪಂಪ್‌ಸೆಟ್‌ಗಳು ಸುಟ್ಟು ಹೋಗುತ್ತಿವೆ. ಲೈನ್‌ಮ್ಯಾನ್‌ಗಳು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ವಿದ್ಯುತ್ ಪರಿವರ್ತಕಗಳ ನಿರ್ವಹಣೆ ಸರಿಯಾಗುತ್ತಿಲ್ಲ. ಲೈನ್‌ಮ್ಯಾನ್ ಸಹಾಯಕನನ್ನು ಇಟ್ಟುಕೊಂಡಿದ್ದಾರೆ. ಸಂಬಳ ತೆಗೆದುಕೊಳ್ಳುವ ನೌಕರ ಆರಾಮವಾಗಿ ತಿರುಗಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಿವೃತ್ತ ಯೋಧ ಗಣೇಶ್ ಮಾತನಾಡಿ, ಮಕ್ಕಳಿಗೆ ಪರೀಕ್ಷಾ ಸಮಯವಾಗಿದೆ. ಸಂಜೆ 6.30 ರಿಂದ 7.30ವರೆಗೆ ವಿದ್ಯುತ್ ಸ್ಥಗಿತಗೊಳಿಸುತ್ತಿರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಪರೀಕ್ಷೆ ಸಮಯದ ಒಂದು ತಿಂಗಳಾದರೂ ಸಮರ್ಪಕವಾಗಿ ವಿದ್ಯುತ್ ನೀಡಿ ಎಂದು ಒತ್ತಾಯಿಸಿದರು.
ಹಂಚಿನಮನೆ ನಾಗರಾಜ್ ಮಾತನಾಡಿ, ಕಡಿಮೆ ವೋಲ್ಟೇಜ್‌ನಿಂದ ರೈತರ ಪಂಪ್‌ಸೆಟ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಸಮಯಕ್ಕೆ ಸರಿಯಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಕಚೇರಿಯಲ್ಲಿ ವಿದ್ಯುತ್ ಸ್ಥಗಿತಗೊಳಿಸುವ ಮಾಹಿತಿ ನೀಡುವವರೇ ಇಲ್ಲ ಎಂದು ದೂರಿದರು.
ಮೆಸ್ಕಾಂ ಜೆಇ ಸುರೇಶ್ ಮಾತನಾಡಿ, ಸರ್ಕಾರ ನಿಗದಿಪಡಿಸಿರುವಂತೆ ರೈತರಿಗೆ 7 ಗಂಟೆ ತ್ರೀ ಫೇಸ್ ವಿದ್ಯುತ್ ನೀಡಲಾಗುತ್ತಿದೆ. ಬೆಳಕು ಯೋಜನೆಯಡಿ ತಾಲೂಕಿನಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲಾಗಿದೆ. ಕಡೂರು, ಬೀರೂರು, ತರೀಕೆರೆ ತಾಲೂಕುಗಳಲ್ಲಿ ವಿದ್ಯುತ್ ಪರಿವರ್ತಕಗಳ ದುರಸ್ತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು.
ಗ್ರಾಹಕರು ಗುಣಮಟ್ಟದ ವಿದ್ಯುತ್ ಉಪಕರಣಗಳನ್ನು ಬಳಸಬೇಕು. ಎರಡು ಎಚ್‌ಪಿಗಿಂತ ಹೆಚ್ಚಿನ ಸಾಮರ್ಥ್ಯದ ಪಂಪ್‌ಸೆಟ್‌ಗಳಿಗೆ ಕಡ್ಡಾಯವಾಗಿ ಕೆಪಾಸಿಟರ್‌ಗಳನ್ನು ಅಳವಡಿಸಿಕೊಳ್ಳಬೇಕು. ಪರವಾನಗಿ ಹೊಂದಿರುವ ಗುತ್ತಿಗೆದಾರರಿಂದಲೇ ವಿದ್ಯುತ್ ಸಂಪರ್ಕ ಪಡೆಯಬೇಕು ಎಂದು ಸಲಹೆ ನೀಡಿದರು.
ಮೆಸ್ಕಾಂ ಚಿಕ್ಕಮಗಳೂರು ಅಧೀಕ್ಷಕ ಅಭಿಯಂತರ ಲೋಕೇಶ್ ಮಾತನಾಡಿ, ಜನ ಸಂಪರ್ಕ ಸಭೆಯಲ್ಲಿ ಪ್ರಸ್ತಾಪಿಸಿರುವ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಕುದ್ರೇಗುಂಡಿಯಲ್ಲಿ ಮೆಸ್ಕಾಂ ಸಬ್ ಸ್ಟೇಷನ್ ಸ್ಥಾಪಿಸಲು ಅರ್ಜಿ ಸಲ್ಲಿಸಲಾಗಿದೆ. ಇದರಿಂದ ಬಹುತೇಕ ಸಮಸ್ಯೆಗಳು ಬಗೆಹರಿಯಲಿವೆ. ಆದರೆ ಇದೂವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ನಿಮ್ಮ ನಿರ್ಲಕ್ಷ್ಯಎದ್ದುತೋರುತ್ತದೆ ಎಂದು ಸಂಘದ ಕಾರ್ಯದರ್ಶಿ ಪಿ.ಕೆ.ಬಸವರಾಜ್ ದೂರಿದರು. ಎಇಇ ಗೌತಮ್ ಮಾತನಾಡಿ, ಕಂದಾಯ ನಿರೀಕ್ಷಕರೊಂದಿಗೆ ಚರ್ಚಿಸಲಾಗಿದ್ದು, ಸರ್ವೇ ಮಾಡಲಾಗಿದೆ. ಜಾಗ ಗುರ್ತಿಸಲಾಗುತ್ತಿದೆ ಎಂದು ತಿಳಿಸಿದರು.
ವಿದ್ಯುತ್ ಬಳಕೆದಾರರ ಸಂಘದ ಕಾರ್ಯಾಧ್ಯಕ್ಷ ಮಾಳೂರುದಿಣ್ಣೆ ವಿನಾಯಕ ಮಾತನಾಡಿ, ಸಭೆ ನಡೆದರೆ ಸಾಲದು, ಗ್ರಾಹಕರ ಸಮಸ್ಯೆಗಳನ್ನು ಅಧಿಕಾರಿಗಳು ತುರ್ತಾಗಿ ಪರಿಹರಿಸಬೇಕು. ರೈತರಿಗೆ ಮೆಸ್ಕಾಂನದ್ದೇ ದೊಡ್ಡ ಸಮಸ್ಯೆಯಾಗಿದೆ. ಸಮರ್ಪಕ ವಿದ್ಯುತ್‌ಗಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ ಎಂದರು.
ಇಇ ಸಿದ್ದೇಶ್, ಮುತ್ತಿನಕೊಪ್ಪ ಶಾಖೆ ಜೆಇ ಶಶಿಕುಮಾರ್, ಕಾಗಲದಿಬ್ಬ ಗುರುಮೂರ್ತಿ ಇತರರಿದ್ದರು.