ವಿದ್ಯುತ್ ಸಮಸ್ಯೆ ತಕ್ಷಣ ಸರಿಪಡಿಸಿ - ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಆಗ್ರಹ - ವಿಜಯವಾಣಿ ವರದಿ ಪ್ರತಿಧ್ವನಿ

PTR_8 MAY_1
Published on

ವಿಟ್ಲ: ಮೆಸ್ಕಾಂ ಜನಸಂಪರ್ಕ ಸಭೆ ವಿಟ್ಲ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ಗುರುವಾರ ನಡೆಯಿತು.

ರೈತ ಸಂಘ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಮಾತನಾಡಿ, ಮೆಸ್ಕಾಂ ಕಚೇರಿ ಮತ್ತೆ ಸ್ಥಳಾಂತರವಾಗುವ ಬಗ್ಗೆ ವಿಜಯವಾಣಿ ವರದಿ ಮಾಡಿದ್ದು, ಸ್ವಂತ ನಿವೇಶನದ ಹೊರತು ಎಲ್ಲಿಗೂ ಸ್ಥಳಾಂತವಾಗಬಾರದು. ಒಂದು ವೇಳೆ ಸ್ಥಳಾಂತರಕ್ಕೆ ಮುಂದಾದರೆ, ಕಚೇರಿಗೆ ಬೀಗ ಜಡಿಯಬೇಕಾಗುತ್ತದೆ. ಮಾಡತ್ತಡ್ಕದ ಕ್ರಶರ್ ಜೋನ್‌ಗೆ ಪ್ರತ್ಯೇಕ ಫೀಡರ್ ಇಲ್ಲದೆ, ಅಲ್ಲಿ ಆಗುತ್ತಿರುವ ಸಮಸ್ಯೆಯಿಂದ ಎಲ್ಲ ಭಾಗದ ಗ್ರಾಹಕರಿಗೆ ಸಮಸ್ಯೆಯಾಗುತ್ತಿದೆ. ಕೃಷಿಕರ ವಿದ್ಯುತ್ ಸಮಸ್ಯೆ ತಕ್ಷಣ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ನಗರದ ೨೩೦ ಟಿಸಿಗಳಿಗೆ ೧೫ ಲೈನ್‌ಮನ್, ಗ್ರಾಮೀಣ ಭಾಗದ ೫೫೦ ಟಿಸಿಗೆ ಕೇವಲ ೧೦ ಲೈನ್‌ಮನ್‌ಗಳನ್ನು ನಿಯೋಜಿಸಲಾಗಿದೆ. ಸಮಸ್ಯೆ ಎಲ್ಲಿ ಹೆಚ್ಚು ಎಂಬುದನ್ನು ಅರ್ಥೈಸಿಕೊಂಡು ಈ ತಾರತಮ್ಯ ಸರಿಪಡಿಸಬೇಕು ಎಂದು ಪೆರ್ನೆ ಗ್ರಾಪಂ ಸದಸ್ಯ ನವೀನ್‌ಕುಮಾರ್ ಆಗ್ರಹಿಸಿದರು. ಸುರಳಿಮೂಲೆಯಲ್ಲಿ ಕಂಬ ಶಿಥಿಲಗೊಂಡ ಬಗ್ಗೆ ಕಳೆದ ಸಭೆಯಲ್ಲಿ ದೂರು ನೀಡಿದ್ದು, ಇದಕ್ಕೆ ಕೈಗೊಂಡ ಕ್ರಮ ಏನು ಎಂದು ಕೃಷಿಕ ರಾಜೀವ ಗೌಡ ಆಗ್ರಹಿಸಿದರು. ಪತ್ರ ಮೂಲಕ ದೂರು ನೀಡಿದರೂ, ಕಂಬ ಬದಲಾವಣೆ ಮಾಡದೆ ಅಪಾಯ ಆಹ್ವಾನಿಸುತ್ತಿದೆ ಎಂದು ಎಚ್ಚರಿಸಿದರು.

ಕರೋಪಾಡಿ ಗ್ರಾಮದ ನೆಲ ಜಲ ಸಂರಕ್ಷಣೆ ಸಮಿತಿ ಅಧ್ಯಕ್ಷ ಪಾಲಿಗೆ ರಾಮಣ್ಣ ಶೆಟ್ಟಿ ಮಾತನಾಡಿ, ಸ್ಥಳೀಯ ಗುತ್ತಿಗೆದಾರರನ್ನು ನಿರ್ಲಕ್ಷಿಸಿ, ಬಂಡವಾಳಶಾಹಿಗಳಿಗೆ ಗುತ್ತಿಗೆ ನೀಡುವ ಕೆಲಸವನ್ನು ಮೆಸ್ಕಾಂ ಮಾಡುತ್ತಿದೆ. ಸ್ಥಳೀಯರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಕಲ್ಲದಂಬೆ ಸಮೀಪ ತೋಟದಲ್ಲಿ ವಿದ್ಯುತ್ ತಂತಿ ನೆಲದ ಮೇಲೆ ಇದ್ದು, ಇದಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ವೆಂಕಪ್ಪ ನಾಯ್ಕ ಬೇಡಿಕೆ ಸಲ್ಲಿಸಿದರು.

ಮೆಸ್ಕಾಂ ಅಽಕ್ಷಕ ಇಂಜಿನಿಯರ್ ಕೃಷ್ಣರಾಜ್ ಕೆ., ಬಂಟ್ವಾಳ ಮೆಸ್ಕಾಂ ಉಪವಿಭಾಗ ಕಾರ್ಯನಿರ್ವಾಹಕ ಇಂಜಿನಿಯರ್ ವೆಂಕಟೇಶ್ ಡಿ.ಎಚ್., ವಿಟ್ಲ ಮೆಸ್ಕಾಂ ಉಪವಿಭಾಗ ಕಾರ್ಯನಿರ್ವಾಹಕ ಇಂಜಿನಿಯರ್ ಗೋವಿಂದರಾಜ್ ಎ.ವಿ., ಲೆಕ್ಕಾಽಕಾರಿ ಚಂದ್ರಶೇಖರ ಉಪಸ್ಥಿತರಿದ್ದರು.

ಮಾಸುವ ಬಿಲ್ ಸಮಸ್ಯೆ

ಮಾಸುವ ಬಿಲ್ ಸಮಸ್ಯೆಯನ್ನು ಸರಿಪಡಿಸಲಾಗುತ್ತಿಲ್ಲ. ಮೀಟರ್‌ಗಳ ಸಮಸ್ಯೆಯಿಂದ ಸರ್ಕಾರದ ಯೋಜನೆಯ ಪ್ರಯೋಜನ ಸಿಗುತ್ತಿಲ್ಲ. ಸಭೆಯಲ್ಲಿ ಸಮಸ್ಯೆ ಹೇಳಿಕೊಂಡರೆ ಅರ್ಧದಷ್ಟಕ್ಕೂ ಪರಿಹಾರ ನೀಡುವ ಕಾರ್ಯವಾಗುತ್ತಿಲ್ಲ ಎಂಬ ಆರೋಪಗಳು ಕೇಳಿಬಂದವು. ಕಳೆದ ಸಭೆಯಲ್ಲಿ ೪೪ ದೂರುಗಳು ಬಂದಿದ್ದು, ೧೪ಕ್ಕೆ ಪರಿಹಾರ ನೀಡಲಾಗಿದೆ. ಇನ್ನೂ ೩೦ ಸಮಸ್ಯೆ ಹಾಗೇ ಉಳಿದುಕೊಂಡಿದೆ. ಕಳೆದ ಜನಸಂಪರ್ಕ ಸಭೆಯಲ್ಲಿ ಧ್ವನಿವರ್ಧಕ ಇಲ್ಲದ ಬಗ್ಗೆ ಜನರು ಹೇಳಿದ್ದು, ಈ ಬಾರಿಯ ಸಭೆಗೂ ವ್ಯವಸ್ಥೆ ಮಾಡಿರಲಿಲ್ಲ. ಮುಂದಿನ ದಿನ ಈ ರೀತಿ ಅವ್ಯವಸ್ಥೆಯಾಗಬಾರದು ಎಂದು ಆಗ್ರಹಿಸಿದರು.

ಕನ್ಯಾನ ಉಪವಿಭಾಗದ ಬೇಡಿಕೆಗೂ ಮೊದಲು ಪೆರ್ನೆ ಉಪವಿಭಾಗದ ಬೇಡಿಕೆಯನ್ನಿಡಲಾಗಿತ್ತು. ಪಂಚಾಯಿತಿಯಿಂದ ಅಗತ್ಯ ಕೊಠಡಿಗಳನ್ನು ನೀಡುವ ನಿರ್ಣಯ ಮಾಡಿದ್ದರೂ, ಉಪಕೇಂದ್ರ ಬಂದಿಲ್ಲ. ಮಾಣಿ ಉಪವಿಭಾಗಕ್ಕೆ ಸುಮಾರು ೧೦ ಗ್ರಾಮದ ೫೫೦ ಟಿಸಿಯ ಒತ್ತಡವಿದೆ. ನಾಲ್ಕು ಗ್ರಾಮಗಳನ್ನು ಸೇರಿಸಿಕೊಂಡು ಪೆರ್ನೆ ಉಪವಿಭಾಗ ಮಾಡುವುದರಿಂದ ಜನರ ಸಮಸ್ಯೆಗೆ ಹೆಚ್ಚಿನ ಸ್ಪಂದನೆ ನೀಡಲು ಸಾಧ್ಯವಿದ್ದು, ತಕ್ಷಣ ಈ ಬಗ್ಗೆ ಕ್ರಮಕೈಗೊಳ್ಳಬೇಕು.

| ಉಮಾನಾಥ ಶೆಟ್ಟಿ ಗ್ಯಾರಂಟಿ ಸಮಿತಿ ಪುತ್ತೂರು ಅಧ್ಯಕ್ಷ

ವಿದ್ಯುತ್ ವಿತರಣೆಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ತಕ್ಷಣ ನಿವಾರಣೆ ಮಾಡಬೇಕು. ಮೀಟರ್ ಕೆಟ್ಟುಹೋಗಿರುವ ಗ್ರಾಹಕರಿಗೆ ವಿದ್ಯುತ್ ಬಿಲ್ ಮೇಲಿನ ಸರ್ಕಾರದ ರಿಯಾಯಿತಿ ಒದಗಿಸಬೇಕು. ಮುಂದಿನ ಸಭೆಯಲ್ಲಿ ಸಮಸ್ಯೆಗಳು ಕಡಿಮೆಯಾಗುವ ರೀತಿಯಲ್ಲಿ ಅಽಕಾರಿ ವರ್ಗ ಕೆಲಸ ಮಾಡಬೇಕು.

| ಜಯಂತಿ ಎಸ್.ಪೂಜಾರಿ ಗ್ಯಾರಂಟಿ ಸಮಿತಿ ಬಂಟ್ವಾಳ ಅಧ್ಯಕ್ಷೆ

ಮೆಸ್ಕಾಂ ಕಚೇರಿ ಸ್ಥಳಾಂತರದ ಯಾವ ಪ್ರಸ್ತಾಪವೂ ಇಲಾಖೆ ಮುಂದಿಲ್ಲ. ಸ್ವಂತ ನಿವೇಶದಲ್ಲಿ ಕಟ್ಟಡ ನಿರ್ಮಿಸಿ ಬಳಿಕವೇ ಅಲ್ಲಿಗೆ ಸ್ಥಳಾಂತರವಾಗಲಿದೆ. ದೂರುಗಳನ್ನು ಪ್ರತಿ ತಿಂಗಳ ಕೊನೆಯ ಶನಿವಾರ ಕಾರ್ಯನಿರ್ವಾಹಕ ಇಂಜಿನಿಯರ್ ಸ್ಥಿತಿಗತಿ ಪರಿಶೀಲಿಸಲಿದ್ದಾರೆ. ಮೀಟರ್ ರೀಡಿಂಗ್ ಸಮಸ್ಯೆ ತಪ್ಪಿಸುವ ನಿಟ್ಟಿನಲ್ಲಿ ಪ್ರೋಬ್ ಬಳಕೆ ಮಾಡಿ ಸ್ವಯಂಚಾಲಿತ ಬಿಲ್ಲಿಂಗ್ ಮಾಡಲಾಗುತ್ತಿದೆ.

| ಕೃಷ್ಣರಾಜ್ ಕೆ. ಮೆಸ್ಕಾಂ ಅಽಕ್ಷಕ ಅಭಿಯಂತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net