

ವಿಟ್ಲ: ಜನಸಂಪರ್ಕ ಸಭೆಯಲ್ಲಿ ಇಟ್ಟ ಬೇಡಿಕೆಯನ್ನು ಈಡೇರಿಸದಿರಲು ಕಾರಣವೇನು? ನಾಗರಿಕರು ಹೋರಾಟ ಮಾಡಿ ಸ್ಥಾಪಿಸಿದ ವಿದ್ಯುತ್ ಪರಿವರ್ತಕವನ್ನು ಏಕಾಏಕಿ ಸ್ಥಳಾಂತರ ಮಾಡಿದ್ದೇಕೆ? ಮಳೆಗಾಲದಲ್ಲಿ ವಿದ್ಯುತ್ ಅಡಚಣೆ ಆಗದ ರೀತಿಯಲ್ಲಿ ಕೈಗೊಂಡ ಕ್ರಮಗಳೇನು? ಯುಜಿ ಕೇಬಲ್ ಅಳವಡಿಕೆಗೆ ಹಾಕಿದ ಯೋಜನೆ ಈಡೇರದಿರಲು ಕಾರಣವೇನು? ಇದು ವಿಟ್ಲ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆದ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಬಳಕೆದಾರರಿಂದ ಕೇಳಿ ಬಂದ ಪ್ರಶ್ನೆಗಳ ಸುರಿಮಳೆ.
ಕನ್ಯಾನ ನಿವಾಸಿ ಪರಶುರಾಮ ಮಾತನಾಡಿ, ಇಲಾಖೆಯಿಂದ ನೀಡುತ್ತಿರುವ ಬಿಲ್ಲುಗಳು ಅಳಿಸಿಹೋಗಿ ಆಡಿಟ್ ಸಮಸ್ಯೆಯಾಗುತ್ತಿದೆ. ಹಲವು ಸಭೆಯಲ್ಲಿ ಅಳಿಸಿ ಹೋಗದ ಬಿಲ್ ನೀಡುವಂತೆ ಬೇಡಿಕೆ ಇಡಲಾಗಿತ್ತು. ಆದರೆ ಇದುವರೆಗೆ ಮೆಸ್ಕಾಂ ಈ ಬೇಡಿಕೆಯನ್ನು ಈಡೇರಿಸಿಲ್ಲ. ಕೇಂದ್ರ ಸರ್ಕಾರದ ಸಂಸ್ಥೆಗಳು ಇ-ಮೇಲ್ಗೆ ಬಿಲ್ ರವಾನಿಸುವಂತೆ ಮೆಸ್ಕಾಂ ಕೂಡ ಮಾಬೇಕು ಎಂದು ಬೇಡಿಕೆ ಇಟ್ಟರು.
ಪೆರ್ನೆ ಗ್ರಾ.ಪಂ.ಸದಸ್ಯ ನವೀನ್ ಕುಮಾರ್ ಮಾತನಾಡಿ, ಬಿಳಿಯೂರು ಗ್ರಾಮದ ಪೆರ್ನೆಯಲ್ಲಿ ನಾಗರಿಕರು ಹೋರಾಟ ಮಾಡಿ ವಿದ್ಯುತ್ ಪರಿವರ್ತಕವನ್ನು ಸ್ಥಾಪನೆ ಮಾಡಿಸಿದ್ದು, ಆ ಬಳಿಕ ವಿದ್ಯುತ್ ವಿತರಣೆ ಸಮರ್ಪಕವಾಗಿತ್ತು. ೨೦ ದಿನಗಳ ಹಿಂದೆ ಏಕಾಏಕಿ ಆ ಟ್ರಾನ್ಸ್ಫಾರ್ಮರ್ ಸ್ಥಳಾಂತರ ಮಾಡಲಾಗಿದೆ. ಇದರಿಂದ ನೂರಾರು ಮನೆಗಳಿಗೆ ಲೋ ವೋಲ್ಟೇಜ್ ಸಮಸ್ಯೆ ಕಾಡುತ್ತಿದೆ. ತಕ್ಷಣ ಹಿಂದೆ ಇದ್ದಲ್ಲಿ ಪರಿವರ್ತಕವನ್ನು ಸ್ಥಾಪನೆ ಮಾಡಬೇಕು ಎಂದು ಹೇಳಿದರು.
ಕರೋಪಾಡಿ ಗ್ರಾಮದ ನೆಲ-ಜಲ ಸಂರಕ್ಷಣೆ ಸಮಿತಿ ಅಧ್ಯಕ್ಷ ಪಾಲಿಗೆ ರಾಮಣ್ಣ ಶೆಟ್ಟಿ ಮಾತನಾಡಿ, ಕೃಷಿ ಪಂಪ್ಸೆಟ್ಗಳನ್ನು ಕೃಷಿಕರ ಹೆಸರಿನಲ್ಲಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ೫, ೧೦ ಸೆಂಟ್ಸ್ ಜಾಗವನ್ನು ಹೊಂದಿರುವವರು ಭೂಪರಿವರ್ತನೆ ಮಾಡಿಕೊಂಡರೂ, ನೀರಾವರಿ ಪಂಪ್ಸೆಟ್ಗಳ ಉಚಿತ ವಿದ್ಯುತ್ ಸಂಪರ್ಕ ಪಡೆದುಕೊಳ್ಳುತ್ತಿದ್ದಾರೆ. ಇದನ್ನು ತಕ್ಷಣ ಸ್ಥಗಿತ ಮಾಡಬೇಕು ಎಂದು ಆಗ್ರಹಿಸಿದರು.
ಮೆಸ್ಕಾಂ ಮಂಗಳೂರು ವೃತ್ತದ ಅಽಕ್ಷಕ ಇಂಜಿನಿಯರ್ ಕೃಷ್ಣರಾಜ್ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಿದರು. ಬಂಟ್ವಾಳ ಮೆಸ್ಕಾಂ ಉಪವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ವೆಂಕಟೇಶ್, ವಿಟ್ಲ ಮೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗೋವಿಂದರಾಜ್ ಮತ್ತು ಎಲ್ಲ ವಿಭಾಗಗಳ ಅಽಕಾರಿಗಳು ಉಪಸ್ಥಿತರಿದ್ದರು.
ವಿವಿಧ ದೂರುಗಳು
ನೆಟ್ಲಮುಡ್ನೂರಿನಿಂದ ಗಡಿಯಾರವರೆಗೆ ಯುಜಿ ಕೇಬಲ್ ಅಳವಡಿಸಲು ಎಸ್ಟಿಮೇಟ್ ಮಾಡಲಾಗಿತ್ತು. ವಿಟ್ಲ ಪೇಟೆಯಲ್ಲಿ ಸಾಗುವ ಐದು ಪೀಡರ್ಗಳಿಗೆ ಪೇಟೆಯ ಹೊರಗಿನ ತನಕ ಯುಜಿ ಕೇಬಲ್ ಅಳವಡಿಸಿ ಸಮಸ್ಯೆ ಸರಿಪಡಿಸಬೇಕೆಂಬ ಬೇಡಿಕೆ ಇಡಲಾಗಿತ್ತು. ಮಾಣಿ ಬರಿಮಾರು ಪರಿಸರದಲ್ಲಿ ತಂತಿ ತುಂಡಾಗಿ ಬೀಳುತ್ತಿದ್ದು, ಮಾಹಿತಿ ನೀಡಿದರೂ ತಂತಿ ಬದಲಾಯಿಸಲು ಕ್ರಮಕೈಗೊಳ್ಳುತ್ತಿಲ್ಲ. ಕರೋಪಾಡಿ, ಸಾಲೆತ್ತೂರು ಪರಿಸರದಲ್ಲಿ ರಾತ್ರಿ ವಿದ್ಯುತ್ ಹೋದರೆ ಮಾರನೇ ದಿನ ಮಧ್ಯಾಹ್ನದ ಬಳಿಕ ಬರುತ್ತಿದೆ ಎಂದು ದೂರಿದರು.
ಮೌನಕ್ಕೆ ಶರಣು
ಮೆಸ್ಕಾಂ ವಿಟ್ಲ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜನರ ಯಾವ ಪ್ರಶ್ನೆಗೂ ಉತ್ತರ ನೀಡದೆ ಮೌನಕ್ಕೆ ಶರಣಾಗಿದ್ದರು. ಜನರಿಗಾಗುವ ಸಮಸ್ಯೆಗಳಿಗೆ ಹಾಗೂ ಪ್ರಶ್ನೆಗಳಿಗೆ ಉತ್ತರಿಸದೆ ಇರುವುದು ಸರಿಯಲ್ಲ. ಹಿಂದಿನ ಸಭೆಯಲ್ಲಿ ಹೇಳಿಕೊಂಡ ಸಮಸ್ಯೆಗೆ ಪರಿಹಾರ ನೀಡಿದ ಬಗ್ಗೆ ಸರಿಯಾದ ಮಾಹಿತಿಯನ್ನು ಶಾಖಾಽಕಾರಿಗಳಿಂದ ಪಡೆದು ಸಭೆಗೆ ಆಗಮಿಸಬೇಕು. ೧೦ ವರ್ಷಕ್ಕಿಂತ ಹೆಚ್ಚು ಒಂದೇ ಸ್ಥಳದಲ್ಲಿ ಕೆಲಸ ನಿರ್ವಹಿಸುವ ಅಽಕಾರಿಗಳನ್ನು ತಕ್ಷಣ ಸ್ಥಳ ಬದಲಾವಣೆ ಮಾಡಬೇಕು ಎಂದು ರೈತ ಸಂಘ ಜಿಲ್ಲಾ ಅಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಆಗ್ರಹಿಸಿದರು.
ದೂರವಾಣಿ ದೂರಿಗೆ ಸಿಬ್ಬಂದಿಯಿಂದ ಉತ್ತರ
ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಲಾಗದವರಿಗೆ ದೂರವಾಣಿ ಮೂಲಕ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆಯಾದರೂ, ಅದನ್ನು ಅಽಕಾರಿಗಳು ಸ್ವೀಕರಿಸುವ ಬದಲಾಗಿ ಸಿಬ್ಬಂದಿ ಸ್ವೀಕರಿಸುವ ಸ್ಥಿತಿ ಬಂದಿದೆ. ಟ್ರೀ ಕಟ್ಟಿಂಗ್ ಸಂದರ್ಭ ಗೆಲ್ಲುಗಳನ್ನು ಚರಂಡಿಗೆ ಹಾಕಿ ಹೋಗುತ್ತಿದ್ದು, ಇದನ್ನು ತೆಗೆಸುವ ಕೆಲಸ ತಕ್ಷಣ ನಡೆಯಬೇಕು. ಗ್ರಾಮೀಣ ಭಾಗದಲ್ಲಿ ಒಂದು ತಿಂಗಳು ಕನಿಷ್ಠ ಮೊತ್ತದ ಪಾವತಿಗೆ ಬಾಕಿಯಾದರೆ ಸಂಪರ್ಕ ಕಡಿತ ಮಾಡಬಾರದು ಎಂಬ ಬೇಡಿಕೆಯನ್ನು ಅಽಕಾರಿಗಳ ಬದಲು ಸಿಬ್ಬಂದಿಯಲ್ಲಿ ಹೇಳಬೇಕಾಯಿತು ಎಂದು ಸಾಮಾಜಿಕ ಹೋರಾಟಗಾರ ವೆಂಕಟ್ರಮಣ ಪುಣಚ ಹೇಳಿದರು.