ಅಪಾಯಕಾರಿ ಮರ, ಹಳೇ ತಂತಿ ತೆರವು: ಬಳಕೆದಾರರ ಆಗ್ರಹ : ಕುಂಬ್ರದಲ್ಲಿ ಮೆಸ್ಕಾಂ ಜನಸಂಪರ್ಕ ಸಭೆ

mescom
ಕುಂಬ್ರದ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ವಿದ್ಯುತ್ ಬಳಕೆದಾರರು ಅಹವಾಲು ಮಂಡಿಸಿದರು. ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್, ಕಾರ್ಯನಿರ್ವಾಹಕ ಇಂಜಿನಿಯರ್ ಯಂ.ರಾಮಚಂದ್ರ ಮೊದಲಾದವರಿದ್ದರು.
Published on

ವಿಜಯವಾಣಿ ಸುದ್ದಿಜಾಲ, ಪುತ್ತೂರು ಗ್ರಾಮಾಂತರ

ಇಲಾಖೆಯಲ್ಲಿ ಪವರ್‌ಮನ್‌ಗಳ ಕೊರತೆ ಇರುವುದರಿಂದ ಮಳೆಗಾಲದ ತುರ್ತು ಕೆಲಸಗಳಿಗೆ ಸಮಸ್ಯೆಯಾಗುತ್ತಿದ್ದು, ಪವರ್‌ಮನ್ ಹುದ್ದೆ ಶೀಘ್ರ ಭರ್ತಿ ಮಾಡಬೇಕು. ಅಪಾಯ ತಂದೊಡ್ಡುವ ಹಳೇ ವಿದ್ಯುತ್ ತಂತಿ ಬದಲಾವಣೆ ಮಾಡಬೇಕು. ವಿದ್ಯುತ್ ತಂತಿ ಮೇಲೆ ಮುರಿದು ಬೀಳುವ ಸಾಧ್ಯತೆ ಇರುವ ಅಪಾಯಕಾರಿ ಕೊಂಬೆಗಳನ್ನು ತೆರವುಗೊಳಿಸಬೇಕು ಎಂದು ಮೆಸ್ಕಾಂ ಬಳಕೆದಾರರು ಆಗ್ರಹಿಸಿದರು.

ಕುಂಬ್ರದ ಗ್ರಾಮಾಂತರ ಉಪವಿಭಾಗದ ಮೆಸ್ಕಾಂ ಕಚೇರಿಯಲ್ಲಿ ಪುತ್ತೂರು ಗ್ರಾಮಾಂತರ ಹಾಗೂ ನಗರ ಉಪವಿಭಾಗಮಟ್ಟದ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಅಹವಾಲು ಸಲ್ಲಿಸಿದರು.

ಕುಂಬ್ರ ಮೆಸ್ಕಾಂ ಕಚೇರಿಯ ವಿದ್ಯುತ್ ಬಿಲ್ ಪಾವತಿ ಯಂತ್ರ ಬೇರೆಡೆಗೆ ಸ್ಥಳಾಂತರಿಸಬಾರದು. ಕೂಡಲೇ ಟೌನ್ ಫೀಡರ್ ಕೆಲಸ ಪೂರ್ಣಗೊಳಿಸಬೇಕು. ಪೆರ್ಲಂಪಾಡಿ ಪೇಟೆ, ಸಿಆರ್‌ಸಿ ಕಾಲನಿ, ಕಟ್ಟಪುಣಿ ಭಾಗದ ಹಳೇ ತಂತಿಗಳನ್ನು ಬದಲಾವಣೆ ಮಾಡಬೇಕು. ದೊಡ್ಡಮನೆಯಲ್ಲಿ ಹೆಚ್ಚುವರಿಯಾಗಿ 100 ಕೆ.ವಿ ಟಿಸಿ ಅಳವಡಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್, ಕಾರ್ಯನಿರ್ವಾಹಕ ಇಂಜಿನಿಯರ್ ಯಂ.ರಾಮಚಂದ್ರ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಿ.ಎಚ್.ಶಿವಶಂಕರ್, ಅಲ್ಲದೆ ಪುತ್ತೂರು ನಗರ, ಬನ್ನೂರು ಶಾಖೆ, ಪುತ್ತೂರು ಶಾಖೆ-2, ಉಪ್ಪಿನಂಗಡಿ ಶಾಖೆ, ಸವಣೂರು, ಬೆಟ್ಟಂಪಾಡಿ, ಈಶ್ವರಮಂಗಲ ಮತ್ತು ಕುಂಬ್ರ ಶಾಖೆಯ ಮೆಸ್ಕಾಂ ಅಧಿಕಾರಿಗಳು ಉಪಸ್ಥಿತರಿದ್ದರು.

ಕೊಳ್ತಿಗೆ ಗ್ರಾಪಂ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್, ಸದಸ್ಯ ಶ್ಯಾಮಸುಂದರ ರೈ ಕೆರೆಮೂಲೆ, ಸದಸ್ಯರಾದ ಪವನ್ ಡಿ.ಜಿ, ಬಾಲಕೃಷ್ಣ ಕೆಮ್ಮಾರ, ಒಳಮೊಗ್ರು ಗ್ರಾಪಂ ಸದಸ್ಯರಾದ ಮಹೇಶ್ ರೈ ಕೇರಿ, ವಿನೋದ್ ಶೆಟ್ಟಿ ಮುಡಾಲ, ಕುಂಬ್ರ ವರ್ತಕ ಸಂಘದ ಪ್ರಮುಖರಾದ ಶ್ಯಾಮ್‌ಸುಂದರ ರೈ ಕೊಪ್ಪಳ, ರಾಜೇಶ್ ರೈ ಪರ್ಪುಂಜ, ಎಸ್.ಮಾಧವ ರೈ ಕುಂಬ್ರ, ನಾರಾಯಣ ಪೂಜಾರಿ ಕುರಿಕ್ಕಾರ, ಮೆಲ್ವಿನ್ ಮೊಂತೆರೋ, ದಿವಾಕರ ಶೆಟ್ಟಿ, ಪುರಂದರ ಶೆಟ್ಟಿ ಮುಡಾಲ ಭಾಗವಹಿಸಿದ್ದರು.

ತೋಟದ ನಡುವೆ ಎಚ್‌ಟಿ ಲೈನ್ ಬೇಡ

ಮಾಡಾವಿನಿಂದ ಮಾಲೆತ್ತೋಡಿಯಾಗಿ ಪೆರ್ಲಂಪಾಡಿಗೆ ಮುಖ್ಯರಸ್ತೆಯಲ್ಲಿ ಎಚ್.ಟಿ ಲೈನ್ ಬರಬೇಕು. ತೋಟದ ನಡುವೆ ಬಂದರೆ ತೊಂದರೆಯಾಗುತ್ತದೆ ಎಂದು ಕೊಳ್ತಿಗೆ ಗ್ರಾಮಸ್ಥರು ತಿಳಿಸಿದರು. ಕೆರೆಮೂಲೆ ಪರಿಶಿಷ್ಟ ಜಾತಿ ಕಾಲನಿಯ ವಿದ್ಯುತ್ ತಂತಿ ಬದಲಾವಣೆ, ಕೊಳ್ತಿಗೆ ಮೇರಡ್ಕ ಟಿ.ಸಿ ಸಮಸ್ಯೆ, ಅಡ್ಕಾರೆಗುಂಡಿ ವಿದ್ಯುತ್ ತಂತಿ ಬದಲಾವಣೆಯ ಕುರಿತು ಕೊಳ್ತಿಗೆ ಗ್ರಾಮದ ವಿದ್ಯುತ್ ಬಳಕೆದಾರರು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net