ವಿದ್ಯುತ್ ಸ್ಪರ್ಶಿಸಿ ಪವರ್‌ಮನ್ ಸಾವು

Basavaraj
Published on

ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ಸಮೀಪದ ಪರ್ಪುಂಜ ಎಂಬಲ್ಲಿ ಎಚ್.ಟಿ ವಿದ್ಯುತ್ ಲೈನ್ ಮೇಲೆ ಬಿದ್ದಿದ್ದ ಮರದ ಕೊಂಬೆ ತೆರವು ಸಂದರ್ಭ ಕೊಕ್ಕೆಗೆ ವಿದ್ಯುತ್ ತಂತಿ ಸ್ಪರ್ಶಿಸಿ ಮೆಸ್ಕಾಂ ಪವರ್‌ಮನ್, ವಿಜಯಪುರ ಜಿಲ್ಲೆ ಮುದ್ದೇಬಿಹಾಳದ ಬೂದಿಹಾಳ ನಿವಾಸಿ ಬಸವರಾಜ್(26) ಎಂಬುವರು ಮಂಗಳವಾರ ಮೃತಪಟ್ಟಿದ್ದಾರೆ.

ಕುಂಬ್ರ ಮೆಸ್ಕಾಂ ವಿದ್ಯುತ್ ಉಪಕೇಂದ್ರದಲ್ಲಿ ಪವರ್‌ಮನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತೋಟವೊಂದರ ಬದಿ ಹಾದು ಹೋಗಿದ್ದ ವಿದ್ಯುತ್ ಲೈನ್ ಮೇಲೆ ಮರದ ಕೊಂಬೆ ಬಿದ್ದು ಟ್ರಿಪ್ ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಪವರ್‌ಮನ್‌ಗಳಾದ ಬಸವರಾಜು ಮತ್ತು ಚಂದ್ರಶೇಖರ್ ಅಲ್ಲಿಗೆ ತೆರಳಿ ಅಲ್ಯೂಮಿನಿಯಂ ಕೊಕ್ಕೆ ಬಳಸಿ ಕೊಂಬೆಯನ್ನು ತೆರವುಗೊಳಿಸುತ್ತಿದ್ದರು. ಈ ವೇಳೆ ತಂತಿಗೆ ಕೊಕ್ಕೆ ತಗುಲಿ ಇಬ್ಬರೂ ಪಕ್ಕದ ಕಿರುತೋಡಿಗೆ ಬಿದ್ದರು. ಚಂದ್ರಶೇಖರ್ ಅಪಾಯದಿಂದ ಪಾರಾಗಿದ್ದಾರೆ. ಆದರೆ ಬಸವರಾಜ್ ಸುಟ್ಟ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ದಕ್ಷ ಸಿಬ್ಬಂದಿ:ಮೆಸ್ಕಾಂ ಈಶ್ವರಮಂಗಲ ಶಾಖೆಯಲ್ಲಿ ಈ ಹಿಂದೆ ಪವರ್‌ಮನ್ ಆಗಿ ಕರ್ತವ್ಯ ನಿರ್ವಹಿಸಿದ್ದ ಬಸವರಾಜ್ ಒಂದು ವರ್ಷದ ಹಿಂದೆಯಷ್ಟೇ ಮುಂಬಡ್ತಿ ಪಡೆದು ಕುಂಬ್ರ ವಿದ್ಯುತ್ ಉಪಕೇಂದ್ರಕ್ಕೆ ವರ್ಗಾವಣೆಗೊಂಡಿದ್ದರು. ಪ್ರಾಮಾಣಿಕ ಕರ್ತವ್ಯದ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದರು. ಈಶ್ವರಮಂಗಲದಲ್ಲಿ ಬಾಡಿಗೆ ಕೋಣೆಯಲ್ಲಿ ವಾಸ್ತವ್ಯ ಹೊಂದಿದ್ದ ಅವರು ಮೂರು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net