ಮೆಸ್ಕಾಂ ಕಚೇರಿ ಸ್ಥಳಾಂತರ ಹುನ್ನಾರ

Ptr_Mescom
Published on

ವಿಟ್ಲ: ಸರ್ಕಾರಿ ಕಚೇರಿಗಳಲ್ಲಿ ಜನರ ಓಡಾಟಕ್ಕೆ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸುವುದು ಸಹಜ ಪ್ರಕ್ರಿಯೆ. ಆದರೆ ಜನಸಂಪರ್ಕ ಸಭೆಯಲ್ಲಿ ಕಚೇರಿ ಬದಲಾವಣೆ ಮಾಡಬೇಕೆಂಬ ಬೇಡಿಕೆ ಇಟ್ಟಿದ್ದಾರೆಂದು ಹೇಳಿಕೊಂಡು ವಾಹನ ನಿಲುಗಡೆಯೇ ಇಲ್ಲದ ಭಾಗಕ್ಕೆ ಸದ್ದಿಲ್ಲದೆ ಸ್ಥಳಾಂತರಕ್ಕೆ ಮುಂದಾಗಿರುವುದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.

ವಿಟ್ಲ ಪುರಭವನದ ಸಮೀಪದ ಕೆಪಿಟಿಸಿಎಲ್ ಉಪ ಕೇಂದ್ರದ ಸಮೀಪದ ಕಟ್ಟಡ್ಡದಲ್ಲಿ ಮೆಸ್ಕಾಂ ಕಚೇರಿ ಕಾರ್ಯ ನಿರ್ವಹಿಸುತ್ತಿದ್ದು, ವಿಟ್ಲ ಮೆಸ್ಕಾಂಗೆ ಸಹಾಯಕ ಅಭಿಯಂತರ ಬರುತ್ತಿದ್ದಂತೆ ಸರ್ಕಾರಿ ಬಸ್ ನಿಲ್ದಾಣದ ಸಮೀಪದಲ್ಲಿರುವ ಖಾಸಗಿ ಕಟ್ಟಡವನ್ನು ಬಾಡಿಗೆ ಪಡೆದು ಅಲ್ಲಿ ಕಾರ್ಯಾಲಯ ನಡೆಸಿಕೊಂಡು ಬರಲಾಗುತ್ತಿತ್ತು.

ಜನಸಂಪರ್ಕ ಸಭೆಯಲ್ಲಿ ಸ್ವಂತ ಕಟ್ಟಡಕ್ಕೆ ಮೆಸ್ಕಾಂ ವ್ಯವಸ್ಥೆ ಮಾಡಿ ಅಲ್ಲಿಗೆ ವರ್ಗಾವಣೆ ಆಗುವಂತೆ ಕೇಳಿದ ವಿಚಾರವನ್ನು ತಿರುಚಿಕೊಂಡು ಕಟ್ಟಡದಲ್ಲಿ ಸರಿಯಾದ ವ್ಯವಸ್ಥೆಯಿಲ್ಲ ಎಂಬ ನೆಪ ಹೇಳಿಕೊಂಡು ವಿಟ್ಲ ಪೇಟೆಯಿಂದ ಹೊರಭಾಗದಲ್ಲಿರುವ ಚಂದಳಿಕೆ ಸಮೀಪದ ಕಟ್ಟಡವೊಂದಕ್ಕೆ ವರ್ಗಾವಣೆಗೆ ಆದೇಶವಾಗಿದೆ.

ಹೊಸ ಕಚೇರಿಯಾಗುವ ವಿಟ್ಲ ಪುತ್ತೂರು ರಸ್ತೆಯ ಖಾಸಗಿ ಕಟ್ಟಡದ ಸ್ಥಳಕ್ಕೆ ಜನ ಸಾಮಾನ್ಯರು ಓಡಾಡುವುದಕ್ಕೆ ಸ್ವಂತ ವಾಹನ ಅಥವಾ ಬಾಡಿಗೆ ವಾಹನವನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ತಲೆದೋರಿದೆ. ನಡೆದು ಹೋಗಲೂ ಸಾಧ್ಯವಿಲ್ಲದ, ಬಸ್ ನಿಲುಗಡೆಯೇ ಇಲ್ಲದ ಸ್ಥಳವನ್ನು ನೋಡಿ ಕಚೇರಿ ಮಾಡುವ ಮೂಲಕ ಗ್ರಾಹಕರು ಇತ್ತ ಕಡೆ ಬರದಂತೆ ನೋಡಿಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಆದೇಶ ತಕ್ಷಣ ಹಿಂಪಡೆಯಬೇಕು!

ಜನರಿಗೆ ಅನುಕೂಲವಾಗಿರುವ ಈಗಿನ ಕಛೇರಿಯನ್ನೇ ಮುಂದುವರಿಸಬೇಕು. ಚಂದಳಿಕೆಗೆ ಸ್ಥಳಾಂತರ ಮಾಡುವಂತೆ ಮಾಡಿದ ಆದೇಶವನ್ನು ತಕ್ಷಣ ಮೆಸ್ಕಾಂ ನಿರ್ದೇಶಕರು ಹಿಂಪಡೆಯಬೇಕೆಂಬ ಆಗ್ರಹ ಗ್ರಾಹಕರಿಂದ ಕೇಳಿ ಬರುತ್ತಿದೆ.

ಸರ್ಕಾರಿ ದರದಲ್ಲಿ ಕಚೇರಿ ಇಲ್ಲ!

ಕಚೇರಿ ಸ್ಥಳಾಂತರದ ಸಾಧಕ ಬಾದಕದ ಬಗ್ಗೆ ಗ್ರಾಹಕರಲ್ಲಿ ಚರ್ಚೆ ನಡೆಸದ ಮೆಸ್ಕಾಂ ಏಕಾಏಕಿ ಕ್ರಮಕ್ಕೆ ಮುಂದಾಗಿದೆ. ಈ ಬಗ್ಗೆ ಗ್ರಾಹಕರು ಪ್ರಶ್ನೆ ಮಾಡಿದರೆ ವಿಟ್ಲ ಪೇಟೆಯ ಭಾಗದಲ್ಲಿ ಸರ್ಕಾರಿ ಬಾಡಿಗೆ ದರದಲ್ಲಿ ಕಟ್ಟಡ ಸಿಕ್ಕಿಲ್ಲ. ಆ ಕಾರಣಕ್ಕೆ ಅಲ್ಲಿ ಕಟ್ಟಡ ಪಡೆಯಾಲಾಗಿದ್ದು, ಇದಕ್ಕೆ ಹಿರಿಯ ಅಧಿಕಾರಿಗಳಿಂದ ಅನುಮತಿ ದೊರೆತಿದೆ. ಪೇಟೆಯ ಭಾಗದಲ್ಲಿ ಕಚೇರಿ ಇರಬೇಕೆಂದರೆ ಕಡಿಮೆ ಬಾಡಿಗೆಯ ಕಟ್ಟಡವನ್ನು ನೀವೇ ಹುಡುಕಿ ಕೊಡಿ ಎಂಬ ಉತ್ತರವನ್ನು ನೀಡಲಾಗುತ್ತಿದೆ.

ಸಭೆಯ ಬೇಡಿಕೆಗೆ ಬೆಲೆಯಿಲ್ಲ

ವಿಟ್ಲ ಪೇಟೆಯ ಮೂಲಕ ಕನ್ಯಾನ, ಪುಣಚ, ಪೆರುವಾಯಿ ಪೀಡರ್‌ಗಳ ಜತೆಗೆ ವಿಟ್ಲ ಪೇಟೆಯ ಫೀಡರ್ ಹೋಗುತ್ತಿದ್ದು, ಒಂದು ಫೀಡರ್‌ನಲ್ಲಿ ಸಮಸ್ಯೆಯಾದರೆ ಎಲ್ಲಾ ಫೀಡರ್‌ಗಳಲ್ಲಿ ವಿದ್ಯುತ್ ಕಡಿತ ಮಾಡಬೇಕಾದ ವ್ಯವಸ್ಥೆಯಿದೆ. ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಪೇಟೆಯ ಹೊರವಲಯದ ತನಕ ಯುಜಿ ಕೇಬಲ್ ಅಳವಡಿಸುವ ಕಾರ್ಯ ಮಾಡಬೇಕೆಂಬ ಬೇಡಿಕೆಯನ್ನು 2016ರಿಂದ ಜನ ಸಂಪರ್ಕ ಸಭೆಯಲ್ಲಿ ಕೇಳಲಾಗುತ್ತಿದೆ. ಆದರೆ ಅದಕ್ಕೆ ಅಧಿಕಾರಿ ವರ್ಗ ಯಾವುದೇ ಕ್ರಮವನ್ನೂ ತೆಗೆದುಕೊಳ್ಳದೆ, ಜನರಿಗೆ ತೊಂದರೆಯಾಗುವಂತೆ ಕಚೇರಿ ಮಾಡಲು ಹೊರಟಿದೆ ಎಂಬ ಆರೋಪ ಕೇಳಿ ಬಂದಿದೆ.

ಕೆಪಿಟಿಸಿಎಲ್ ಉಪ ಕೇಂದ್ರದ ಸಮೀಪ ಇಲಾಖೆಗೆ ಸಂಬಂಧಿಸಿದ ಜಾಗವಿದ್ದು, ಜನಸಂಪರ್ಕ ಸಭೆಯಲ್ಲಿ ಈ ಜಾಗವನ್ನು ಮೆಸ್ಕಾಂ ಪಡೆದುಕೊಂಡು ಸ್ವಂತ ಕಟ್ಟಡ ನಿರ್ಮಾಣ ಮಾಡಬೇಕೆಂಬ ಬೇಡಿಕೆಯನ್ನು ಇಡಲಾಗಿತ್ತು. ಮೆಸ್ಕಾಂ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಅಲ್ಲೇನಾಗಿದೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸದೆ ಕಚೇರಿ ಜಾಗವನ್ನು ಬದಲಾವಣೆ ಮುಂದಾಗಿರುವುದು ಸರಿಯಲ್ಲ. ರಾಮಣ್ಣ ಪಾಳಿಗೆ, ಸಾಮಾಜಿಕ ಹೋರಾಟಗಾರರು

ರಾಮಣ್ಣ ಪಾಳಿಗೆ, ಸಾಮಾಜಿಕ ಹೋರಾಟಗಾರರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net