

ಉಡುಪಿ: ಪೂರ್ವ ಮುಂಗಾರು ಮಳೆಯಿಂದ ನಗರದ ಅನೇಕ ಕಡೆಗಳಲ್ಲಿ ವಿದ್ಯುತ್ ಕಡಿತ ಸಮಸ್ಯೆ ಉಂಟಾಗಿದ್ದು, ನಗರ ಭಾಗದಲ್ಲಿ 24 ಗಂಟೆಯೊಳಗೆ ದುರಸ್ತಿ ಮಾಡದಿದ್ದರೆ ಶಿಕ್ಷಣ ಸಂಸ್ಥೆಗಳಿಗೆ, ಕೈಗಾರಿಕೆಗಳಿಗೆ, ಆಸ್ಪತ್ರೆಗಳಿಗೆ ತೊಂದರೆಯಾಗುತ್ತಿದೆ. ಮೆಸ್ಕಾಂ ಮತ್ತು ನಗರಸಭೆ ಜಂಟಿಯಾಗಿ ತುರ್ತು ಕಾರ್ಯಾಚರಣೆ ನಡೆಸಬೇಕು. ನಗರಕ್ಕೆ ಪ್ರತ್ಯೇಕ ಕಂಟ್ರೋಲ್ ರೂಂ ತೆರೆಯಬೇಕು ಎಂದು ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.
ನಗರಸಭೆಯಲ್ಲಿ ಮೆಸ್ಕಾಂ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದ್ರಾಳಿ ಭಾಗದಲ್ಲಿ ವಿದ್ಯುತ್ ಕಡಿತವಾಗಿ 48 ಗಂಟೆ ಕಳೆದರೂ ದುರಸ್ತಿಯಾಗಿರಲಿಲ್ಲ. ಮೆಸ್ಕಾಂ ಅಧಿಕಾರಿಗಳು ದೂರಿಗೆ ಸ್ಪಂದಿಸುತ್ತಿಲ್ಲ. ಕಂಟ್ರೋಲ್ ರೂಂನಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂದರು.
ಮೆಸ್ಕಾಂ ಅಧೀಕ್ಷಕ ದಿನೇಶ್ ಉಪಾಧ್ಯಾಯ ಮಾತನಾಡಿ, ಮಳೆಗಾಲದಲ್ಲಿ ತುರ್ತು ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸಲು 55 ಮಂದಿ ಗ್ಯಾಂಗ್ಮೆನ್ಗಳನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಉಡುಪಿ ವಿಭಾಗದಲ್ಲಿ ಶೇ. 40ರಷ್ಟು ಪವರ್ ಮ್ಯಾನ್ಗಳ ಕೊರತೆ ಇದೆ. ಈಗಾಗಲೇ ಮೆಸ್ಕಾಂ ಜೂನಿಯರ್ ಪವರ್ ಮೆನ್ಗ್ಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಹೊಸದಾಗಿ 100 ಮಂದಿ ಸಿಬ್ಬಂದಿ ಸೇವೆಗೆ ಸೇರ್ಪಡೆಯಾಗಲಿದ್ದಾರೆ. ವಿದ್ಯುತ್ ಕಂಬ ಮತ್ತು ವಯರ್ ಕೊರತೆ ಇಲ್ಲ. 5 ವಾಹನ, 400 ಕಂಬ, 16 ಟಿಸಿಗಳು ಲಭ್ಯವಿದೆ ಎಂದರು.
ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯೆ ರಜನಿ ಹೆಬ್ಬಾರ್, ಸ್ಥಾಯೀ ಸಮಿತಿ ಅಧ್ಯಕ್ಷ ಸುಂದರ ಕಲ್ಮಾಡಿ, ಪ್ರಭಾರ ಪೌರಾಯುಕ್ತ ಮಹೇಶ್ ಉಪಸ್ಥಿತರಿದ್ದರು.