ಮಣಿಹಳ್ಳದಲ್ಲಿ ಸರಣಿ ಅಪಘಾತಕ್ಕೆ ಮೆಸ್ಕಾಂ ಇಂಜಿನಿಯರ್ ಬಲಿ

001
Published on

ಬಂಟ್ವಾಳ: ಇಲ್ಲಿನ ಮಣಿಹಳ್ಳ ಸಮೀಪ ಶುಕ್ರವಾರ ಮಧ್ಯಾಹ್ನ ಎರಡು ಕಾರು ಹಾಗೂ ಕೆಎಸ್ಸಾರ್ಟಿಸಿ ಬಸ್ ಮಧ್ಯೆ ನಡೆದ ಅಪಘಾತದಲ್ಲಿ ಮೆಸ್ಕಾಂ ವಿಟ್ಲದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರವೀಣ್ ಜೋಷಿ(43) ಮೃತಪಟ್ಟಿದ್ದಾರೆ. ಇನ್ನೊಂದು ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ.

ಮಣಿಹಳ್ಳ ಸಮೀಪ ಜೋಷಿ ಪ್ರಯಾಣಿಸುತ್ತಿದ್ದ ಕಾರು ಸಹಿತ ಇನ್ನೊಂದು ಕಾರು ಹಾಗೂ ಬಸ್ಸಿನ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದ್ದರೆ, ಗಾಯಾಳುಗಳನ್ನು ಹೊರತೆಗೆಯಲು ಸ್ಥಳೀಯರು ಪ್ರಯಾಸಪಟ್ಟರು. ಕ್ರೇನ್ ಬಳಸಿ ವಾಹನಗಳನ್ನು ರಸ್ತೆಯಿಂದ ಬದಿಗೆ ಸರಿಸಲಾಯಿತು. ಗಾಯಾಳುವನ್ನು ಆಂಬುಲೆನ್ಸ್ ಮೂಲಕ ತುಂಬೆ ಹಾಗೂ ಅಲ್ಲಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಗಂಭೀರ ಗಾಯಗೊಂಡಿದ್ದ ಪ್ರವೀಣ್ ಜೋಷಿ ಅಸುನೀಗಿದರು. ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

ಬಂಟ್ವಾಳ ಕಡೆಯಿಂದ ವಗ್ಗ ಕಡೆಗೆ ಹೋಗುತ್ತಿದ್ದ ಬ್ರಿಝಾ ಕಾರು, ವಗ್ಗದ ಮಧ್ವದಲ್ಲಿ ತನ್ನ ಮನೆಯಿಂದ ಬರುತ್ತಿದ್ದ ಪ್ರವೀಣ್ ಜೋಷಿ ಅವರ ಕಾರುಗಳ ನಡುವೆ ಅಪಘಾತ ಸಂಭವಿಸಿತ್ತು. ಹಿಂಬದಿಯಿಂದ ಬಂದ ಬಸ್ ಕಾರುಗಳಿಗೆ ಡಿಕ್ಕಿ ಹೊಡೆದು ಮತ್ತಷ್ಟು ತೀವ್ರತೆಗೆ ಕಾರಣವಾಯಿತು. ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಎಸ್‌ಐ ಮೂರ್ತಿ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದು, ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net