ಗಾಳಿ, ಮಳೆ : ಮೆಸ್ಕಾಂಗೆ 33.40 ಕೋಟಿ ರೂ. ನಷ್ಟ

6788838a-ab75-48f0-bf36-4bb2029a52a1
Published on


ಮಂಗಳೂರು : ಗಾಳಿ, ಮಳೆಗೆ ಮೆಸ್ಕಾಂ ವ್ಯಾಪ್ತಿಯಲ್ಲಿ 21,702 ವಿದ್ಯುತ್ ಕಂಬಗಳು ಧರಾಶಾಯಿಯಾಗಿದ್ದು ವಿದ್ಯುತ್ ಪರಿವರ್ತಕಗಳು ಸಹಿತ ಒಟ್ಟು 33.40 ಕೋಟಿ ರೂ. ಮೊತ್ತದ ಮೆಸ್ಕಾಂ ಅಸ್ತಿಗಳಿಗೆ ಹಾನಿಯಾಗಿದೆ. ದ.ಕ. ಜಿಲ್ಲೆಯಲ್ಲಿ 10.14 ಕೋಟಿ ರೂ. ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ 9.67 ಕೋಟಿ ರೂ. ಹಾನಿಯಾಗಿದ್ದು, ಈ ಎರಡು ಜಿಲ್ಲೆಗಳಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿದೆ. ಉಡುಪಿ ಜಿಲ್ಲೆಯಲ್ಲಿ 8.48 ಕೋಟಿ ರೂ. ಶಿವಮೊಗ್ಗ ಜಿಲ್ಲೆಯಲ್ಲಿ 5.09 ಕೋಟಿ ರೂ ಮೊತ್ತದ ಆಸ್ತಿಗಳು ಹಾನಿಗೊಳಗಾಗಿದೆ. ಹಾನಿಗೊಳಗಾದ ಬಹುತೇಕ ವಿದ್ಯುತ್ ಕಂಬ, ಪರಿವರ್ತಕ ಹಾಗೂ ವಿದ್ಯುತ್ ಮಾರ್ಗಗಳನ್ನು ಬದಲಾಯಿಸಿ ವಿದ್ಯುತ್ ಪೂರೈಕೆ ಸುಗಮಗೊಳಿಸಲಾಗಿದೆ. ಕೆಲವು ಕಡೆ ದುರಸ್ತಿ ಮತ್ತು ಬದಲಾವಣೆ ಕಾರ್ಯ ಮುಂದುವರಿದಿದೆ.
ದ.ಕ.ದಲ್ಲಿ 6369, ಚಿಕ್ಕಮಗಳೂರು-5697, ಶಿವಮೊಗ್ಗ -4960 , ಉಡುಪಿ -4776 ವಿದ್ಯುತ್ ಕಂಬಗಳು ಹಾನಿಗೊಳಗಾಗಿವೆ.
ಹಾನಿಗೊಳಗಾಗಿರುವ 21702 ವಿದ್ಯುತ್ ಕಂಬಗಳ ಪೈಕಿ 21245 ಕಂಬಗಳನ್ನು ಬದಲಾಯಿಸಲಾಗಿದೆ. ನಾಲ್ಕು ಜಿಲ್ಲೆಗಳಲ್ಲಿ 316 ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿವೆ. ಹಾನಿಗೊಳಗಾಗಿರುವ 316 ವಿದ್ಯುತ್ ಪರಿವರ್ತಕಗಳ ಪೈಕಿ ಎಲ್ಲ 316 ಪರಿವರ್ತಕಗಳನ್ನು ದುರಸ್ತಿ/ಬದಲಾಯಿಸಲಾಗಿದೆ.
ದಕ್ಷಿಣ ಕನ್ನಡದಲ್ಲಿ 318.15 ಕಿ.ಮೀ., ಉಡುಪಿಯಲ್ಲಿ 86.39 ಕಿ.ಮೀ., ಚಿಕ್ಕಮಗಳೂರು ಜಿಲ್ಲೆಯಲ್ಲಿ 111.94 ಕಿ.ಮೀ. ,ಶಿವಮೊಗ್ಗ ಜಿಲ್ಲೆಯಲ್ಲಿ 97.82 ಕಿ.ಮೀ ಒಟ್ಟು 614.30 ಕಿ.ಮೀ. ವಿದ್ಯುತ್ ಮಾರ್ಗಗಳು ಹಾನಿಗೊಂಡಿವೆ. ಇದರಲ್ಲಿ 604.43 ಕಿ.ಮೀ. ವಿದ್ಯುತ್ ಮಾರ್ಗ ಸರಿಪಡಿಸಲಾಗಿದೆ.
ಮೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ಗಾಳಿ, ಮಳೆ ಲೆಕ್ಕಿಸದೆ ಅವಿರತವಾಗಿ ಶ್ರಮಿಸಿ ಗ್ರಾಹಕರ ಸಹಕಾರದಿಂದ ವಿದ್ಯುತ್
ಪೂರೈಕೆಯ ಅಡಚಣೆಗಳನ್ನು ಸರಿಪಡಿಸುತ್ತಿದ್ದಾರೆ. ಇನ್ನು ಹಲವೆಡೆ ದುರಸ್ಥಿ ಕಾರ್ಯ ಮುಂದುವರಿದಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net