ರಾಜಕೀಯವಾಗಿ ಗಮನ ಸೆಳೆಯಲು ಯತ್ನ, ಎಂಎಲ್‌ಸಿ ಶರಣಗೌಡ ಬಯ್ಯಪುರ ಅನಿಸಿಕೆ

191221 MLC Sharangouda Visit Ganganala Temple
ತಾವರಗೇರಾ ಸಮೀಪದ ಗಂಗನಾಳ ಪಂಚಪಕ್ಷಿ ಮಾರುತಿ ದೇವಸ್ಥಾನದಲ್ಲಿ ಎಂಎಲ್ಸಿ ಶರಣಗೌಡ ಬಯ್ಯಪುರರನ್ನು ಭಾನುವಾರ ಸನ್ಮಾನಿಸಲಾಯಿತು.
Published on

ತಾವರಗೇರಾ: ಬೆಳಗಾವಿಯ ಸುವರ್ಣ ಸೌಧದಲ್ಲಿ ಅಧಿವೇಶನ ನಡೆದಿರುವ ಸಂದರ್ಭದಲ್ಲಿ ರಾಜಕೀಯವಾಗಿ ಗಮನ ಸೆಳೆಯಲು ಎಂಇಎಸ್ ಆಟ ಆಡುತ್ತಿದ್ದು, ಅವರ ಆಟ ನಡೆಯುವುದಿಲ್ಲ ಎಂದು ಎಂಎಲ್‌ಸಿ ಶರಣಗೌಡ ಬಯ್ಯಪುರ ಹೇಳಿದರು.

ಗಂಗನಾಳ ಶ್ರೀ ಪಂಚಪಕ್ಷಿ ಮಾರುತಿ ದೇವಸ್ಥಾನದಲ್ಲಿ ಭಾನುವಾರ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಬೇರೆ ಸಮಯದಲ್ಲಿ ಸುಮ್ಮನಿದ್ದು, ಅಧಿವೇಶನ ನಡೆಯುವಾಗಲೇ ಕಿಡಿಗೇಡಿತನ ಪ್ರದರ್ಶನ ಮಾಡಲಾಗುತ್ತಿದೆ. ಎಂಇಎಸ್ ಪುಂಡಾಟಿಕೆ ಬಗ್ಗೆ ಬಿಜೆಪಿಯನ್ನು ದೂಷಿಸುವುದು ಸರಿ ಅಲ್ಲ. ಈ ಹಿಂದೆ ಎಲ್ಲ ಸರ್ಕಾರಗಳ ಅವಧಿಯಲ್ಲೂ ಎಂಇಎಸ್ ಪುಂಡಾಟಿಕೆ ಮೆರೆದಿದೆ. ಮಹಾಮೇಳವ ಮೂಲಕ ಕಿಡಿಗೇಡಿತನ ಕೃತ್ಯಕ್ಕೆ ಇಳಿದಿದೆ. ಈ ಸಂಘಟನೆಯ ಹಿಂದೆ ಅನೇಕ ಕಾಣದ ಕೈಗಳಿವೆ. ಎಂಇಎಸ್ ಏನೇ ಆಟವಾಡಿದರೂ ನಡೆಯುವದಿಲ್ಲ. ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಜಖಂಗೊಳಿಸಿದವರಿಗೆ ಶಿಕ್ಷೆ ಆಗಬೇಕು ಎಂದರು.

ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಸಂಗಪ್ಪ ಹೇರೂರು, ಶರಣಗೌಡ ಬಯ್ಯಪುರರನ್ನು ಸನ್ಮಾನಿಸಿದರು. ಗ್ರಾಪಂ ಸದಸ್ಯರಾದ ಮಹೇಶ ಕನ್ನಾಳ, ಯಂಕಣ್ಣ ಮಾಸ್ಟರ್, ಲಿಂಗರಾಜ ಹಂಚಿನಾಳ, ದೇವಸ್ಥಾನ ಸಮಿತಿ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net