

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯದಲ್ಲಿ ಎಂಇಎಸ್ ಬ್ಯಾನ್ ಮಾಡಬೇಕು. ಎಂಇಎಸ್ನವರ ಪುಂಡಾಟ ಮಿತಿಮೀರಿದೆ. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಬಾರಿಯೂ ಒಂದಿಲ್ಲ ಒಂದು ತಂಟೆ ತಗೆಯುತ್ತಾರೆ. ಆದರೆ ನಮ್ಮ ರಾಜಕಾರಣಿಗಳು ಅದನ್ನು ಉದಾರವಾಗಿ ತೆಗೆದುಕೊಳ್ಳುತ್ತಾರೆ. ಮಹಾರಾಷ್ಟ್ರದವರು ನಮ್ಮ ಮೇಲೆ ಅವಲಂಬಿತಾಗಿದ್ದಾರೆ. ಸೊಲ್ಲಾಪುರದಲ್ಲಿ ಶೇ. 80ರಷ್ಟು ಜನರು ಕನ್ನಡ ಮಾತನಾಡುತ್ತಾರೆ. ಬೆಳಗಾವಿಯ ಎಂಇಎಸ್ನವರಿಗೆ ಉದ್ಯೋಗವಿಲ್ಲ ಎಂದರು.
ಕೆಲ ರಾಜಕಾರಣಿಗಳು ಎಂಇಎಸ್ನವರನ್ನು ವೋಟ್ ಬ್ಯಾಂಕ್ ಮಾಡಿಕೊಂಡಿದ್ದಾರೆ. ಕಂಡಕ್ಟರ್ ಮೇಲೆ ಪೋಕ್ಸೋ ಕೇಸ್ ಹಾಕಿಸಿದ್ದಾರೆ. ರಾಜ್ಯ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು. ಬೆಳಗಾವಿ, ನಿಪ್ಪಾಣಿ, ಖಾನಾಪುರದಲ್ಲಿ ಕರ್ನಾಟಕದ ಕನ್ನಡಿಗರು ಇದ್ದಾರೆಯೇ? ಎಂಬ ಸಂಶಯ ಮೂಡುತ್ತಿದೆ. ಕನ್ನಡ ಬಂದವರೂ ಮರಾಠಿ ಮಾತನಾಡುತ್ತಾರೆ. ಬೆಳಗಾವಿಯಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಕನ್ನಡಪರ ಹೋರಾಟಗಾರರಿಗೆ ರಕ್ಷಣೆ ನೀಡಬೇಕು. ನಮ್ಮಲ್ಲಿ ನಮ್ಮವರೇ ವೈರಿಗಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೆ ಸಹ ಮಾತನಾಡುತ್ತೇನೆ. ರಾಜಕೀಯ ಬಿಟ್ಟು ಬೆಳಗಾವಿಯಲ್ಲಿ ಇಂತಹ ಘಟನೆಗಳು ಆಗದಂತೆ ನೋಡಿಕ್ಕೊಳ್ಳಬೇಕು. ಎಂಇಎಸ್ನವರು ದೇಶದ್ರೋಹಿ ಕೆಲಸ ಮಾಡುತ್ತಿದ್ದಾರೆ. ಇಂತಹವರನ್ನು ನಿಷೇಧಿಸಬೇಕು ಎಂದರು.
ನಾನು ಶಿಕ್ಷಣ ಸಚಿವನಾಗಿದ್ದಾಗ ಸಹ ಬಹಳ ಹಾರಾಡಿದ್ದರು. ಮುಂಬೈನಲ್ಲಿ ನಮ್ಮ ಶಾಲೆಗಳನ್ನು ಬಂದ್ ಮಾಡಿದ್ದರು. ಖಾನಾಪುರದಲ್ಲಿ ಕನ್ನಡ ಹೈಸ್ಕೂಲ್ ನಡೆಸಲು ಬಿಡಲಿಲ್ಲ. ಆಗ ನಾನು ಕೈಗೊಂಡಂತಹ ನಿರ್ಣಯಗಳನ್ನು ಈಗಿನ ಸರ್ಕಾರ ಕೈಗೊಳ್ಳುತ್ತಿಲ್ಲ. ನಮ್ಮ ನೀರು, ಗಾಳಿ ಸೇವಿಸಿ ನಮ್ಮವರಿಗೇ ತೊಂದರೆ ಕೊಡುವ ಸಂಘಟನೆಯನ್ನು ಮೊದಲು ರಾಜ್ಯದಲ್ಲಿ ಸರ್ಕಾರ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದರು.