

ಬಳ್ಳಾರಿ: ಎಂಇಎಸ್ ಹಾಗೂ ಶಿವಸೇನೆ ಸಂಘಟನೆಗಳ ನಿಷೇಧಕ್ಕೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ರಾಯಲ್ ವೃತ್ತದಿಂದ ಡಿಸಿ ಕಚೇರಿವರೆಗೆ ಮಂಗಳವಾರ ಪ್ರತಿಭಟನೆ ನಡೆಸಿದರು.
ಕರವೇ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್ ಮಾತನಾಡಿ, ಎಂಇಎಸ್ ಪುಂಡಾಟಿಕೆಯಿಂದ ಬೆಳಗಾವಿಯಲ್ಲಿ ಅಶಾಂತಿ ಸೃಷ್ಟಿಯಾಗುತ್ತಿದೆ. ಈ ಸಂಘಟನೆಯು ಬೆಳಗಾವಿ ಕನ್ನಡಿಗರ ಮೇಲೆ ಮರಾಠಿಗರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದೆ. ಇದರೊಂದಿಗೆ ಶಿವಸೇನೆಯೂ ಸೇರಿ ಅಲ್ಲಿನ ವಾತಾವರಣ ಕದಡುತ್ತಿದೆ ಎಂದು ದೂರಿದರು.
ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ಎಂಇಎಸ್, ಶಿವಸೇನೆ ಕೃತ್ಯಗಳ ವಿರುದ್ಧ ಹಲವು ವರ್ಷಗಳಿಂದ ಹೋರಾಟ ನಡೆಸುತ್ತ ಬಂದಿದ್ದರೂ ಕ್ರಮವಾಗಿಲ್ಲ. ಈಗಲೂ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಕನ್ನಡಿಗರ ಹಲ್ಲೆ ನಡೆಸಿ ಅವರ ಆಸ್ತಿಪಾಸ್ತಿ, ವಾಹನಗಳನ್ನು ನಷ್ಟಗೊಳಿಸಲಾಗುತ್ತಿದೆ. ಇದಕ್ಕೆಲ್ಲ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವಸೇನೆ ಕಾರಣವಾಗಿದ್ದು, ಕೂಡಲೇ ಆ ಎರಡೂ ಸಂಘಟನೆಗಳನ್ನು ನಿಷೇಧಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಬಳಿಕ ಎಡಿಸಿ ಪಿ.ಎಸ್. ಮಂಜುನಾಥ್‌ಗೆ ಮನವಿ ಸಲ್ಲಿಸಿದ ಕಾರ್ಯಕರ್ತರು, ಎಂಇಎಸ್ ಹಾಗೂ ಶಿವಸೇನೆ ವಿರುದ್ಧ ಘೋಷಣೆ ಕೂಗುತ್ತ, ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಬಂಧಿಸಿ, ವಾಹನದಲ್ಲಿ ಕರೆದೊಯ್ದರು. ಮುಖಂಡರಾದ ಗುಡಸಲಿ ರಾಜ, ಕರೂರು ದೇವರೆಡ್ಡಿ, ಬಳೆ ಮಲ್ಲಿಕಾರ್ಜುನ, ಪಂಪನಗೌಡ, ಗೋವಿಂದಪ್ಪ, ಶಿವಕುಮಾರ, ತಿಪ್ಪಾರೆಡ್ಡಿ ಮತ್ತಿತರರಿದ್ದರು.