ಎಂಇಎಸ್ ನಿಷೇಧಿಸಲು ಆಗ್ರಹ

29Anand1
ಬೆಳಗಾವಿ ಎಂಇಎಸ್ ಸಂಘಟನೆ ನಿಷೇಧಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ವಾಜೀದ್ ಹಿರೇಕುಡಿ, ಮಹಾಂತೇಶ ರಣಗಟ್ಟಿಮಠ, ಕರುಣಾಕರ ಶೆಟ್ಟಿ. ಅನ್ನಪೂರ್ಣಾ ಅಸೂರಕರ, ಸಂಗೀತ ಕಾಂಬಳೆ ಇತರರಿದ್ದರು.
Published on

ಬೆಳಗಾವಿ: ಚಳಿಗಾಲ ಅಧಿವೇಶದ ವೇಳೆ ನಗರದಲ್ಲಿ ಮಹಾಮೇಳ ನಡೆಸಲು ಉದ್ದೇಶಿಸಿರುವ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಸಂಘಟನೆಯನ್ನು ರಾಜ್ಯದಿಂದ ನಿಷೇಧಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ (ಶಿವರಾಮೇಗೌಡ ಬಣದ) ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕುಂದಾನಗರಿಯಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ವೇಳೆ ಕರಾಳ ದಿನ ಆಚರಣೆ ಮಾಡಿ ಎಂಇಎಸ್ ನಾಡ ವಿರೋಧಿ ನಿಲುವು ಪ್ರದರ್ಶಿಸಿತ್ತು, ಈಗ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನದ ವೇಳೆ ಮಹಾಮೇಳ ನಡೆಸಲು ಷಡ್ಯಂತ್ರ ರೂಪಿಸಿ, ಕನ್ನಡಿಗರ ಭಾವನೆಗೆ ಧಕ್ಕೆ ತರಲು ಮುಂದಾಗಿದೆ. ಆದ್ದರಿಂದ ನಾಡದ್ರೋಹಿ ಎಂಇಎಸ್ ಸಂಘಟನೆ ಕೂಡಲೇ ನಿಷೇಧಿಸಿ,ಕರಾಳ ದಿನಾಚರಣೆಯಲ್ಲಿ ಭಾಗಿಯಾದ ಮುಖಂಡರನ್ನು ಗಡಿಪಾರು ಮಾಡುವಂತೆ ಮನವಿ ಮೂಲಕ ಒತ್ತಾಯಿಸಿದರು.

ವಾಜೀದ್ ಹಿರೇಕುಡಿ, ಮಹಾಂತೇಶ ರಣಗಟ್ಟಿಮಠ, ಸಲೀಂ ಕಾಲೇಖಾನ್, ಯುನುಸ್ ಹಿರೇಕುಡಿ, ಕರುಣಾಕರ ಶೆಟ್ಟಿ, ಅನ್ನಪೂರ್ಣಾ ಅಸೂರಕರ, ಸಂಗೀತ ಕಾಂಬಳೆ ಇತರರಿದ್ದರು.

ಎಂಇಎಸ್ ನಾಯಕರನ್ನು ಗಡಿಪಾರು ಮಾಡಲಿ

ಗಡಿಭಾಗದಲ್ಲಿ ಭಾಷಾ ವೈಷಮ್ಯದ ವಿಷ ಬೀಜ ಬಿತ್ತಿ, ರಾಜಕೀಯ ಲಾಭಕ್ಕಾಗಿ ಮರಾಠಿ ಭಾಷಿಕರರನ್ನು ಪ್ರಚೋದಿಸಿ ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿರುವ ಎಂಇಎಸ್ ನಾಯಕರನ್ನು ಗಲಭೆಕೋರರೆಂದು ಪರಿಗಣಿಸಿ ಗಡಿಪಾರು ಮಾಡಬೇಕೆಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಒತ್ತಾಯಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ರಾಜ್ಯೋತ್ಸವ ದಿನ ಕರಾಳ ದಿನ ಆಚರಿಸಿ, ಅಧಿವೇಶನದ ಸಂದರ್ಭದಲ್ಲಿ ಮರಾಠಿ ಮೇಳ ಮಾಡಿ, ಕನ್ನಡಿಗರು ಸಂಭ್ರಮ ಪಡುವ ಸಂದರ್ಭದಲ್ಲಿ ಪದೆ ಪದೇ ಶಾಂತಿ ಭಂಗ ಮಾಡುತ್ತಿರುವ ಎಂಇಎಸ್ ನಾಯಕರನ್ನು ಮುಂಜಾಗ್ರತವಾಗಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net