

ತುಮಕೂರು : ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನಗೊಳಿಸಿದ ಎಂಇಎಸ್ ಪುಂಡಾಟಿಕೆ ವಿರುದ್ಧ ಜಿಲ್ಲೆಯ ಎಲ್ಲ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಟೌನ್‌ಹಾಲ್ ವೃತ್ತದಲ್ಲಿ ಸಮಾವೇಶಗೊಂಡ ಕನ್ನಡಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಸಂಗೊಳ್ಳಿ ರಾಯಣ್ಣನ ಪ್ರತಿಮೆ ವಿರೂಪಗೊಳಿಸಿದ ಮಹಾರಾಷ್ಟ್ರ ಏಕೀಕರಣ ಸಮಿತಿ ಪುಂಡಾಟಿಕೆ ವಿರುದ್ಧ ಆಕ್ರೋಶ ಹೊರ ಹಾಕಿದರಲ್ಲದೆ, ಎಂಇಎಸ್ ಮುಖಂಡರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿ ವರ್ಷ ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ ಸಂದರ್ಭದಲ್ಲಿಯೇ ಎಂಇಎಸ್ ಕಾರ್ಯಕರ್ತರು ಪುಂಡಾಟಿಕೆ ಮೆರೆಯುತ್ತ ಬಂದಿದ್ದಾರೆ. ಇಂತಹ ಕಿಡಿಗೇಡಿ ವರ್ತನೆಗೆ ರಾಜ್ಯ ಸರ್ಕಾರ ಕೂಡಲೇ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಎಂಇಎಸ್ ಸಂಘಟನೆ ನಿಷೇಧಿಸಿ: ಸ್ವಾತಂತ್ರೃ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ಭಗ್ನಗೊಳಿಸಿರುವ ಎಂಇಎಸ್ ಸಂಘಟನೆಯನ್ನು ನಿಷೇಧಿಸುವ ಜತೆಗೆ ಅವರನ್ನು ಗಡಿಪಾರು ಮಾಡಬೇಕು ಎಂದು ಕನ್ನಡಪರ ಸಂಘಟನೆಯ ಒಕ್ಕೂಟದ ಅಧ್ಯಕ್ಷ ಎಸ್.ಶಂಕರ್ ಸರ್ಕಾರವನ್ನು ಆಗ್ರಹಿಸಿದರು.
ಸುವರ್ಣಸೌಧದ ಮುಂದೆ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿ ನಿರ್ಮಾಣವಾಗಬೇಕು. ಅಲ್ಲಿಯವರೆಗೆ ಕನ್ನಡಿಗರ ಹೋರಾಟ ನಿಲ್ಲುವುದಿಲ್ಲ. ನಾವು ಮುಂದಿಟ್ಟಿರುವ ಹೆಜ್ಜೆ ಹಿಂದೆ ತೆಗೆಯುವುದಿಲ್ಲ. ರಾಜ್ಯದಲ್ಲಿ ಎಂಇಎಸ್ ಸಂಘಟನೆಯನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು ಎಂದು ಕನ್ನಡ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಇ.ರಘುರಾಮ್ ಒತ್ತಾಯಿಸಿದರು.
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಎಂಇಎಸ್ ಕಾರ್ಯಕರ್ತರ ಪುಂಡಾಟಿಕೆ ಮಿತಿ ಮೀರಿದೆ. ಕನ್ನಡಿಗರ ಮೇಲೆ ನಡೆಸುತ್ತಿರುವ ದೌರ್ಜನ್ಯ ನಿಲ್ಲಬೇಕು. ಸಂಗೊಳ್ಳಿ ರಾಯಣ್ಣನ ಪ್ರತಿಮೆ ವಿರೂಪಗೊಳಿಸಿರುವುದು ಖಂಡನೀಯ ಎಂದು ಜಿಲ್ಲಾ ಕುರುಬರ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್. ಸುರೇಶ್ ಹೇಳಿದರು.
ಪ್ರತಿಭಟನೆಯಲ್ಲಿ ಜಯಕರ್ನಾಟಕ ಸಂಘಟನೆಯ ಅರುಣ್‌ಕುಮಾರ್, ಕನ್ನಡ ವಿಜಯ ಸೇನೆಯ ಅಧ್ಯಕ್ಷ ಸುಧೀರ್, ಗೌರವಾಧ್ಯಕ್ಷ ಮಹದೇವಣ್ಣ, ಕರವೇ ಆನಂದ್, ಜಿಲ್ಲಾ ಕುರುಬರ ಸಂಘದ ರಾಜಣ್ಣ, ಟಿ ಸೋಮಶೇಖರ್, ಸಂಗೋಳಿ ರಾಯಣ್ಣ ವೇದಿಕೆಯ ರಮೇಶ್, ಗಿರೀಶ್‌ಗೌಡ, ಯಲ್ಲೇಶ್‌ಗೌಡ, ಪ್ರಕಾಶ್, ರಾಜು, ಭಾಗ್ಯಲಕ್ಷ್ಮಿ, ಸುಕನ್ಯ, ಎನ್. ರಾಜು, ಯೋಗೀಶ್, ಗೂಳೂರು ರಾಜಣ್ಣ, ಡಮರುಗ ಉಮೇಶ್, ಪ್ರಸನ್ನ (ಪಚ್ಚಿ) ಮತ್ತಿತರರು ಹಾಜರಿದ್ದರು.
ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿರುವ ಆರೋಪಿಗಳನ್ನು ಬಂಧಿಸಿ, ಕೂಡಲೇ ಗಡಿಪಾರು ಮಾಡಬೇಕು. ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ ನಡೆಯುವ ಪ್ರತಿ ಬಾರಿಯೂ ಎಂಇಎಸ್ ಕಾರ್ಯಕರ್ತರು ಇದೇ ರೀತಿಯ ಪುಂಡಾಟಿಕೆ ಮಾಡುತ್ತಿದ್ದಾರೆ. ಈ ಸಂಘಟನೆಯ ಕಾರ್ಯಕರ್ತರು ಪುಂಡಾಟಿಕೆಗೆ ರಾಜ್ಯ ಸರ್ಕಾರ ಕಡಿವಾಣ ಹಾಕಬೇಕು. ಧನಿಯಾಕುಮಾರ್ ಮುಖಂಡ, ಕನ್ನಡ ಪರ ಸಂಘಟನೆ